ನವದೆಹಲಿ: ರಫೇಲ್ ಹಗರಣದ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಿದ್ದು ವಿಪಕ್ಷಗಳು ನಿರಾಶೆಯಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.ಈ ನಾಲ್ಕು ವರ್ಷ ಮೋದಿ ಸರ್ಕಾರ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಸಿಕ್ಕಿಲ್ಲ, ಆ ನಿರಾಸೆ ಕಾಂಗ್ರೆಸ್‍ಗೆ ಇದೆ ಎಂದಿದ್ದಾರೆ ರಕ್ಷಣಾ ಸಚಿವೆ.
ಬೋಫೋರ್ಸ್ ಹಗರಣ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹೊಡೆತ ನೀಡಿತ್ತು. ಆದರೆ ರಫೇಲ್ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಮಾಡಲಿದೆ.
ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುವುದು ದೇಶದ ಸುರಕ್ಷೆಗಾಗಿ ಆಗಿದೆ. ಅಧಿಕಾರದಲ್ಲಿರುವವರು ಯಾರೇ ಆಗಿದ್ದರೂ ಅದನ್ನೇ ಮಾಡುತ್ತಾರೆ.ಶಸ್ತ್ರಾಸ್ತ್ರ ಸೇರಿದಂತೆ ರಕ್ಷಣಾ ಸಾಮಾಗ್ರಿಗಳನ್ನು ತಕ್ಕ ಸಮಯಕ್ಕೆ ಖರೀದಿಸಬೇಕು.ರಫೇಲ್ ಒಪ್ಪಂದ ದೇಶದ ಜನರ ಸುರಕ್ಷೆಗಾಗಿ ಮಾಡಿರುವುದು.ಆದರೆ ಬೋಫೋರ್ಸ್ ಹಗರಣ ಆಗಿತ್ತು ಎಂದಿದ್ದಾರೆ ನಿರ್ಮಲಾ ಸೀತಾರಾಮನ್.
ಎಚ್‌ಎಎಲ್ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆದರೆ ಈಗ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ಎನ್‍ಡಿಎ ಸರ್ಕಾರ ಎಚ್‌ಎಎಲ್ ಸಂಸ್ಥೆಗೆ ₹1 ಲಕ್ಷ ಕೋಟಿ ಮೌಲ್ಯದ ಒಪ್ಪಂದ ನೀಡಲಾಗಿದೆ. ಈ ಸಂಸ್ಥೆ ನಮ್ಮ ದೇಶದ ಹೆಮ್ಮೆ. ಅದನ್ನು ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.