ADVERTISEMENT

ಗಂಧರ್ವ ಸಂಪುಟದ ಅಂತ್ಯ.. ಲತಾ ಮಂಗೇಶ್ಕರ್‌ ನುಡಿನಮನ

ಚ.ಹ.ರಘುನಾಥ
Published 6 ಫೆಬ್ರುವರಿ 2022, 21:43 IST
Last Updated 6 ಫೆಬ್ರುವರಿ 2022, 21:43 IST
ಲತಾ ಮಂಗೇಶ್ಕರ್‌
ಲತಾ ಮಂಗೇಶ್ಕರ್‌    

ಬೆಂಗಳೂರು: ಲತಾ ಮಂಗೇಶ್ಕರ್‌ ನಿರ್ಗಮನದೊಂದಿಗೆ ಭಾರತೀಯ ಸಿನಿಮಾ ಸಂಗೀತದ ‘ಗಂಧರ್ವ ಸಂಪುಟ’ ಕೊನೆಗೊಂಡಂತಾಗಿದೆ. ಅವರು ಕೇವಲ ಹಿನ್ನೆಲೆ ಗಾಯಕಿಯಷ್ಟೇ ಆಗಿರಲಿಲ್ಲ. ಸಿನಿಮಾ ಸಂಗೀತಕ್ಕೆ ಘನತೆ ತಂದುಕೊಟ್ಟವರು ಹಾಗೂ ಕೋಟಿ ಕೋಟಿ ಭಾರತೀಯರ ಸಂಗೀತ ಸ್ವಪ್ನಗಳಿಗೆ ‘ಸರಿಗಮ’ ಸಂಯೋಜಿಸಿದ ಸಾಧಕಿ.

ಭಾರತೀಯ ಚಿತ್ರರಂಗದಲ್ಲಿ ಅನೇಕಗಾಯಕಿಯರ ಹೆಜ್ಜೆಗುರುತುಗಳಿವೆ.ಆದರೆ, ಅವೆಲ್ಲವೂ ಲತಾ ಎನ್ನುವ ಏಕಚಕ್ರಾಧಿಪತ್ಯದಡಿ ಹರಡಿಕೊಂಡಿರುವ ಬಿಳಲುಗಳಷ್ಟೇ. ಸಂಗೀತಗಾರರ ಪಾಲಿಗೆ ಅಕ್ಕನಂತೆ, ಅಮ್ಮನಂತಿದ್ದ ಲತಾದೀದಿ ಅವರಿಗೆ ಆ ಅರ್ಹತೆ ಕೇವಲ ವಯಸ್ಸಿನಿಂದ ಸಿದ್ಧಿಸಿರಲಿಲ್ಲ; ಸಾಧನೆಯಿಂದ ದೊರೆತ ಗೌರವವಾಗಿತ್ತದು. ತಿಳಿ ವರ್ಣದ ಸೀರೆಯುಟ್ಟು, ಶಾಲು ಧರಿಸಿದ ಲತಾ ಅವರು ಸುಳಿದಾಡಿದರೆಂದರೆ, ಸಹೃದಯರ ಪಾಲಿಗೆ ಮಾನುಷಿಯ ರೂಪು ತಳೆದ ಶಾರದೆಯೇ ಕಾಣಿಸಿಕೊಂಡಂತೆ ಭಾಸವಾಗುತ್ತಿತ್ತು.

ಬಡೆ ಗುಲಾಂ ಅಲಿ ಖಾನ್‌, ಪಂಡಿತ್‌ರವಿಶಂಕರ್‌ ಅವರಂಥ ಶಾಸ್ತ್ರೀಯ ಸಂಗೀತದ ದಂತಕಥೆಗಳು ತಲೆದೂಗುವಷ್ಟು ದಿವ್ಯವಾಗಿತ್ತು ಲತಾ ಅವರ ಗಾಯನವೈಭವ. ಸ್ಪಷ್ಟ ಉಚ್ಚಾರ, ಅಪೂರ್ವ ಮಾಧುರ್ಯಗಳ ಸಂಗಮವಾಗಿದ್ದ ಅವರ ಹಾಡುಗಾರಿಕೆ, ಅಮೃತತ್ವಕ್ಕೆ ಹಂಬಲಿಸುವ ನಾದೋಪಾಸನೆಯಂತಿತ್ತು.

ADVERTISEMENT

ತಂದೆಯೇ ಗುರು

ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ (ಸೆ. 28, 1929) ಲತಾ ಅವರ ತಂದೆ ದೀನಾನಾಥ್‌ ಮಂಗೇಶ್ಕರ್‌ ತಮ್ಮದೇ ಆದ ನಾಟಕ ಕಂಪನಿ ಹೊಂದಿದ್ದರು. ನಾಟಕಗಳೆಂದರೆ ಸಂಗೀತದ ಮತ್ತೊಂದು ರೂಪವೇ ಆಗಿದ್ದ ದಿನಗಳವು. ನಾಟಕದ ಹಾಡುಗಳನ್ನು ಕೇಳುತ್ತಾ
ಬೆಳೆದ ಲತಾ ಅವರಲ್ಲಿ ಅವರಿಗರಿವಿಲ್ಲದಂತೆಯೇ ಗಾಯಕಿಯೊಬ್ಬಳು ರೂಪುಗೊಂಡಿದ್ದಳು. ಒಮ್ಮೆ ಅವರ ತಂದೆ, ಸಂಗೀತಪಾಠ ಮಾಡುವಾಗ ಶಿಷ್ಯರೊಬ್ಬರ ಹಾಡುಗಾರಿಕೆಯಲ್ಲಿ ರಾಗ ಯಡವಟ್ಟಾಯಿತು. ತಕ್ಷಣವೇ ಅಲ್ಲಿದ್ದ ಬಾಲಕಿ ಲತಾ, ರಾಗ ಸರಿಪಡಿಸಿದಳು. ಮಗಳ ಸಂಗೀತದ ಆಸಕ್ತಿ ಅಪ್ಪನಿಗೆ ಅರಿವಾದುದೇ ಆಗ. ಮರುದಿನ ಮಗಳ ಕೈಗೆ ತಾನ್ಪುರ ಕೊಟ್ಟು, ಸಂಗೀತದ ಪಾಠ ಆರಂಭಿಸಿದರು. ನಾಟಕ ಕಂಪನಿಯ ಅಂಗಳವೇ ಪಾಠಶಾಲೆ, ಅಪ್ಪನೇ ಮೊದಲ ಗುರು. ಮುಂದೆಲ್ಲ ಸಂಗೀತ ಸೋಪಾನದ ಹಾದಿ. ಕೆ.ಎಲ್‌. ಸೈಗಾಲ್‌ರ ಹಾಡುಗಳೆಂದರೆ ಅಪ್ಪ–ಮಗಳಿಬ್ಬರಿಗೂ ಮೈಯೆಲ್ಲ ಕಿವಿಯಾಗುತ್ತಿತ್ತು. ಅಪ್ಪನ ನಾಟಕಗಳಲ್ಲಿ ಮಗಳು ಬಾಲಕಲಾವಿದೆಯಾಗಿ ಬಣ್ಣ ಹಚ್ಚಿದ್ದೂ ಆಯಿತು; ಹಾಡಿದ್ದೂ ಆಯಿತು.

ಲತಾ ಶಾಲೆಗೆ ಹೋಗಿ ಕಲಿತವರಲ್ಲ. ಮನೆಯಲ್ಲಿ, ಕಂಪನಿಯ ಜನರೊಂದಿಗೆ ಅವರ ಶಿಕ್ಷಣ ಕುಂಟುತ್ತಾ ಸಾಗಿತು. ಹಿಂದಿ, ಉರ್ದು, ಬಂಗಾಳಿ ಭಾಷೆಗಳನ್ನು ಮನೆಯಲ್ಲಿಯೇ ಕಲಿತರು. ರಾಮಕೃಷ್ಣ ಬುವಾವಚೆ ಮತ್ತು ಉಸ್ತಾದ್‌ ಅಮಾನತ್‌ ಖಾನ್‌ ಗರಡಿಯಲ್ಲಿ ಅವರ ಹಾಡುಗಾರಿಕೆ ಹದಗೊಂಡಿತು.

ಹಾಡುತ್ತ ಹಾಡುತ್ತ ಬದುಕು

ಲತಾ ಅವರಿಗೆ ಸಿನಿಮಾ ನಂಟು ಕೂಡ ಬಾಲ್ಯದಲ್ಲಿಯೇ ಒದಗಿಬಂತು. ಅವರ ತಂದೆ ನಾಟಕ ಕಂಪನಿಯನ್ನು ಸಿನಿಮಾ ತಂಡವನ್ನಾಗಿಸಿದರು. ಆದರೆ, ಬೆಳ್ಳಿತೆರೆ ಕೈಹತ್ತಲಿಲ್ಲ; ಕಂಪನಿ ನಷ್ಟಕ್ಕೊಳಗಾಯಿತು. ಮಗಳ ಸಂಗೀತಪ್ರತಿಭೆಯ ಬಗ್ಗೆ ಹೆಮ್ಮೆಯಿದ್ದರೂ, ಲತಾ ಅವರು ಸಾರ್ವಜನಿಕವಾಗಿ ಹಾಡುವುದು ಅವರ ತಂದೆಗೆ ಇಷ್ಟವಿರಲಿಲ್ಲ. ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಹಾಡುವುದು ದೀನಾನಾಥರಿಗೆ ಪ್ರಿಯವಾದ ಸಂಗತಿಯಾಗಿರಲಿಲ್ಲ. ಲತಾ ಮೊದಲ ಬಾರಿಗೆ ಸಿನಿಮಾಗೆ ಹಾಡಿದ ಸಂದರ್ಭದಲ್ಲಿ ಅವರ ತಂದೆಗೆ ತೀವ್ರ ಅನಾರೋಗ್ಯ. ಅದೊಂದು ಮರಾಠಿ ಸಿನಿಮಾ. ನಾಟಕ ಕಂಪನಿಯಲ್ಲಿ ಸಹೋದ್ಯೋಗಿಯಾಗಿದ್ದ ಸದಾಶಿವರಾವ್‌ ಎನ್ನುವವರೇ ಸಂಗೀತ ನಿರ್ದೇಶಕರಾದುದರಿಂದ, ಮಗಳಿಗೆ ಸಿನಿಮಾದಲ್ಲಿ ಹಾಡಲಿಕ್ಕೆ ಅನುಮತಿ ನೀಡಿದರು.

ಹದಿಮೂರರ ಬಾಲೆಗೆ ಆರಂಭದಲ್ಲಿ ಹಾಡುಗಾರಿಕೆಯ ಬಾಗಿಲು ಸುಲಭಕ್ಕೆ ತೆರೆದುಕೊಳ್ಳಲಿಲ್ಲ. ತಂದೆಯ ನಂತರ ಕುಟುಂಬದ ಪೋಷಣೆಯ ಜವಾಬ್ದಾರಿ ಹೆಗಲಿಗೇರಿದ್ದರಿಂದ, ಜೀವನೋಪಾಯಕ್ಕಾಗಿ ಸಿನಿಮಾಗಳಲ್ಲಿ ನಟಿಸಬೇಕಾಯಿತು. ಜೀವನದ ದಿಕ್ಕು ಬದಲಾದರೂ, ಸಂಗೀತದ ರಿಯಾಜ್‌ ನಿಲ್ಲಿಸಲಿಲ್ಲ. ಇಂದೋರ್‌, ಪುಣೆ, ಕೊಲ್ಲಾಪುರಗಳ ನಂತರ ಜೀವನ ನೆಲೆಗೊಂಡಿದ್ದು ಮುಂಬೈಯಲ್ಲಿ.

ದೇಶದ ವಿಭಜನೆಯ ಸಂದರ್ಭದಲ್ಲಿ, ಆ ವೇಳೆಗೆ ಖ್ಯಾತನಾಮರಾಗಿದ್ದ ಗಾಯಕಿಯರು ಪಾಕಿಸ್ತಾನದೊಂದಿಗೆ ಗುರ್ತಿಸಿಕೊಂಡಿದ್ದರಿಂದ, ಹೊಸ ಗಾಯಕಿಯರಿಗೆ ಒಂದಷ್ಟು ಅವಕಾಶಗಳು ತೆರೆದುಕೊಂಡವು. ಆ ಅವಕಾಶವನ್ನು ಲತಾ ಸಮರ್ಪಕವಾಗಿ ಬಳಸಿಕೊಂಡರು. ಪ್ರಖರ ಪ್ರತಿಭೆ ಜನಮನ್ನಣೆ ಗಳಿಸಲು ಹೆಚ್ಚು ಕಾಲ ಬೇಕಾಗಲಿಲ್ಲ. ಖ್ಯಾತನಾಮ ಸಂಗೀತ ಸಂಯೋಜಕರ ಪಾಲಿಗೆ ಲತಾ ಅಚ್ಚುಮೆಚ್ಚಾದರು. ಮೊಹಮ್ಮದ್‌ ರಫಿ, ಮುಖೇಶ್‌, ಹೇಮಂತ್ ಕುಮಾರ್‌, ಕಿಶೋರ್‌ ಕುಮಾರ್‌, ಮನ್ನಾ ಡೇ ಅವರಂಥ ಘಟಾನುಘಟಿಗಳ ಜೊತೆ ಹಾಡಿದರು. ಅವರ ಹಾಡುಗಾರಿಕೆಯ ಮೂಲಕ ನಾಯಕಿಯರ ಪಾತ್ರದ ವರ್ಚಸ್ಸಿನೊಂದಿಗೆ ಒಟ್ಟಾರೆ ಸಿನಿಮಾದ ಪ್ರಭಾವಳಿಯೇ ಹಿಗ್ಗತೊಡಗಿತು. ದಿನಕ್ಕೆ ಐದು ಗೀತೆಗಳ ರೆಕಾರ್ಡ್‌ ನಡೆಯುತ್ತಿದ್ದ ದಿನಗಳಲ್ಲೂ, ತಮ್ಮನ್ನು ಸಂಗೀತದ ವಿದ್ಯಾರ್ಥಿನಿಯೆಂದೇ ಭಾವಿಸಿದ್ದ ಅವರು ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ನಿರಂತರವಾಗಿ ನಡೆಸಿದ್ದರು.

ರುಚಿ–ಅಭಿರುಚಿ

ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ಲತಾ ತಮ್ಮ ಹಾಡುಗಾರಿಕೆಯಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಒತ್ತಾಯಕ್ಕಾಗಿ ಕೆಲವೇ ಕೆಲವು ಕ್ಯಾಬರೆ ಗೀತೆಗಳನ್ನು ಹಾಡಿದರಾದರೂ, ಬಾಲಿವುಡ್‌ನ ರತಿ ವರ್ಚಸ್ಸಿನ ಕುಣಿತದ ಹಾಡುಗಳಿಂದ ಅಂತರ ಕಾಪಾಡಿಕೊಂಡರು. ಮರಾಠಿ ಸಿನಿಮಾಗಳ ಜನಪ್ರಿಯ ಲಾವಣಿ ಪ್ರಕಾರವೂ ಅವರಿಗೆ ಅಷ್ಟೇನೂ ಒಗ್ಗಿದಂತಿರಲಿಲ್ಲ.
ಲತಾ ಅವರದು ಸಂಗೀತಗಾರರ ಕುಟುಂಬ. ಅವರ ಕಿರಿಯ ಸೋದರಿಯರಾದ ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್ ಹಾಗೂ ಸೋದರ ಹೃದಯನಾಥ ಮಂಗೇಶ್ಕರ್‌ ಕೂಡ ಸಂಗೀತಕೋವಿದರೇ. ಆದರೆ, ಸಾಧನೆಯಲ್ಲಿ ‘ಅಕ್ಕ’ನದೇ ಯಜಮಾನಿಕೆ.

ಸಂಗೀತವನ್ನು ಹೊರತುಪಡಿಸಿದರೆ ಲತಾ ಅವರಿಗೆ ಓದುವ ಹವ್ಯಾಸವಿತ್ತು. ಕಾದಂಬರಿಗಳ ಓದು, ಅಡುಗೆ ಮಾಡುವುದು ಹಾಗೂ ಛಾಯಾಗ್ರಹಣ–ಅವರ ಬಿಡುವಿನ ರುಚಿಯನ್ನು ಹೆಚ್ಚಿಸುತ್ತಿದ್ದವು.

ಎಪ್ಪತ್ತೈದು ವರ್ಷಗಳ ಲತಾ ಅವರ ಸಂಗೀತಯಾನ ಸಿನಿಮಾಕ್ಷೇತ್ರವನ್ನು ಮೀರಿ, ಭಾರತೀಯ ಸಂಸ್ಕೃತಿಯ ವಿಶಿಷ್ಟ ಅಧ್ಯಾಯವೊಂದಾಗಿದೆ. ಆ ಕಾರಣದಿಂದಲೇ, ಲತಾ ಅವರ ನಿಧನ ಚಲನಚಿತ್ರರಂಗಕ್ಕೆ ಮಾತ್ರವಲ್ಲ, ಒಟ್ಟಾರೆ ಭಾರತೀಯ ಕಲಾಪ್ರಪಂಚದಲ್ಲಿ ಉಂಟಾಗಿರುವ ಬಹುದೊಡ್ಡ ನಿರ್ವಾತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.