ನವದೆಹಲಿ: ದೆಹಲಿಯಲ್ಲಿ ವರುಣನ ಆರ್ಭಟ ನಿಂತಿದ್ದರೂ ಯಮುನೆಯ ಮುನಿಸು ಇನ್ನೂ ತಣಿದಿಲ್ಲ. ಗುರುವಾರವೂ ನದಿಯ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಯಿತು. ಕೆಲವೆಡೆ ಮೆಟ್ರೊ ಸೇವೆಯೂ ವ್ಯತ್ಯಯಗೊಂಡಿತು.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಭಾನುವಾರದವರೆಗೆ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ತುರ್ತು ಸೇವೆ ಹೊರತುಪಡಿಸಿ ಉಳಿದ ಸರ್ಕಾರಿ ಅಧಿಕಾರಿಗಳಿಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸಲು ಸೂಚಿಸಲಾಗಿದೆ. ಖಾಸಗಿ ಕಂಪನಿಗಳು ತಮ್ಮ ನೌಕರರಿಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿವೆ.
ಹರಿಯಾಣದ ಹಥಿನಿಕುಂಡ್ ಬ್ಯಾರೇಜ್ ನೀರಿನ ಹೊರ ಹರಿವು ದೆಹಲಿ ಜನರ ಬದುಕನ್ನು ಸಂಕಷ್ಟದಲ್ಲಿ ಮುಳುಗಿಸಿದೆ. ಹೊರ ಹರಿವಿನ ಪ್ರಮಾಣ ತಗ್ಗಿಸಲು ದೆಹಲಿ ಸರ್ಕಾರ ಮಾಡಿದ ಮನವಿಗೆ ಪ್ರತಿಕ್ರಿಯಿಸಿರುವ ಕೇಂದ್ರವು, ‘ಹೆಚ್ಚುವರಿ ನೀರನ್ನು ನದಿಗೆ ಹರಿಸದೆ ಬೇರೆ ಮಾರ್ಗವಿಲ್ಲ’ ಎಂದು ಉತ್ತರಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಒಂದು ಸಾವಿರ ಜನರನ್ನು ಸ್ಥಳಾಂತರಿಸಿವೆ. ಮುಳುಗಡೆಗೊಂಡಿರುವ ಮನೆಗಳಲ್ಲಿ ಸಿಲುಕಿದ್ದ 3,500 ಜನರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರುವ ಕಾರ್ಯ ನಡೆಯುತ್ತಿದೆ. ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಕೂಡ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ತುರ್ತು ಪರಿಹಾರ ಕಾರ್ಯಕ್ಕೆ ಸೂಚಿಸಿದರು.
ಯಮುನಾ ನದಿ ಸಮೀಪದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ 41 ಸಾವಿರಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಈಶಾನ್ಯ, ಪಶ್ಚಿಮ, ಕೇಂದ್ರ ಮತ್ತು ಆಗ್ನೇಯ ನಗರ ಜಿಲ್ಲೆಯಲ್ಲಿ ಪ್ರವಾಹ ಹೆಚ್ಚಿದೆ. ಅದರಲ್ಲೂ ದೆಹಲಿಯ ಪಶ್ಚಿಮ ಭಾಗವು ಹೆಚ್ಚು ಬಾಧಿತವಾಗಿದೆ.
ಐಷಾರಾಮಿ ಪ್ರದೇಶಗಳೂ ಜಲಾವೃತವಾಗಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ 350 ಮೀಟರ್ ಸಮೀಪದಲ್ಲಿಯೇ ಪ್ರವಾಹ ತಲೆದೋರಿದೆ. ಸಚಿವರು, ಸಚಿವಾಲಯದ ಅಧಿಕಾರಿಗಳೂ ಪ್ರವಾಹದಿಂದ ತತ್ತರಿಸಿದ್ದಾರೆ.
ದೆಹಲಿ ಹೊರಭಾಗದ ರಿಂಗ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಮುಳುಗಡೆಯಾಗಿವೆ. ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಕ್ರಮವಹಿಸಿದ್ದು, ಸಂಚಾರ ದಟ್ಟಣೆ ಹೆಚ್ಚಿದೆ.
ಮೂರು ನೀರು ಶುದ್ಧೀಕರಣ ಘಟಕಗಳು ಮುಳುಗಡೆಯಾಗಿವೆ. ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಮೆಟ್ರೊ ಸೇವೆ ವ್ಯತ್ಯಯ: ಯುಮುನಾ ಬ್ಯಾಂಕ್ ಮೆಟ್ರೊ ಮಾರ್ಗಕ್ಕೆ ತಲುಪುವ ರಸ್ತೆ ಜಲಾವೃತಗೊಂಡಿದೆ. ಈ ನಿಲ್ದಾಣದ ಸೇವೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
‘ಈ ನೀಲಿ ಮಾರ್ಗವು ನೋಯ್ಡಾ ಮತ್ತು ಗಾಜಿಯಾಬಾದ್ ನಡುವೆ ಸಂಪರ್ಕ ಬೆಸೆಯುತ್ತದೆ. ಸದ್ಯಕ್ಕೆ ಈ ಮಾರ್ಗದ ಸೇವೆ ಬಂದ್ ಆಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು’ ಎಂದು ದೆಹಲಿ ಮೆಟ್ರೊ ರೈಲು ಕಾರ್ಪೋರೇಷನ್ (ಡಿಎಂಆರ್‌ಸಿ) ಟ್ವೀಟ್ ಮಾಡಿದೆ.
ಯಮುನಾ ನದಿಗೆ ಡೆಹ್ರಾಡೂನ್ ಬಳಿಯ ದಾಕ್ಪಥರ್ ಮತ್ತು ಯಮುನಾ ನಗರ ಬಳಿಯ ಹಥಿನಿಕುಂಡ್‌ನಲ್ಲಿ ಎರಡು ಬ್ಯಾರೇಜ್ ನಿರ್ಮಿಸಲಾಗಿದೆ. ಈ ನದಿಗೆ ಅಣೆಕಟ್ಟು ನಿರ್ಮಿಸಿಲ್ಲ. ಹಾಗಾಗಿ, ಪ್ರತಿವರ್ಷದ ಮುಂಗಾರಿನಲ್ಲಿ ಸುರಿಯುವ ಮಳೆಯು ಪ್ರವಾಹ ಭೀತಿಯನ್ನು ಸೃಷ್ಟಿಸುತ್ತದೆ.
ದೆಹಲಿಯ ಹಳೇ ರೈಲ್ವೆ ಸೇತುವೆ ಬಳಿ ಬುಧವಾರ ರಾತ್ರಿಯೇ ನದಿಯ ನೀರಿನ ಮಟ್ಟ 208 ಮೀಟರ್ ತಲುಪಿತ್ತು. ಗುರುವಾರ ರಾತ್ರಿ 8ಗಂಟೆಗೆ 208.66 ಮೀಟರ್ ತಲುಪಿದ್ದು, ಇದು 45 ವರ್ಷಗಳ ಬಳಿಕ ಸಾರ್ವಕಾಲಿಕ ದಾಖಲೆಯಾಗಿದೆ.
ದೆಹಲಿಯಲ್ಲಿ ಜಿ20 ಸಭೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ರಾಷ್ಟ್ರ ರಾಜಧಾನಿಯ ಪ್ರವಾಹ ಪರಿಸ್ಥಿತಿಯು ವಿಶ್ವಕ್ಕೆ ಕೆಟ್ಟ ಸಂದೇಶ ರವಾನಿಸಲಿದೆ. ಜೊತೆಗೆ, ನಾವು ಸಂತ್ರಸ್ತರನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕಿದೆ. ಹಾಗಾಗಿ, ಬ್ಯಾರೇಜ್‌ನಿಂದ ನೀರಿನ ಹೊರ ಹರಿವು ತಗ್ಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ, ಮುಖ್ಯಮಂತ್ರಿ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.
ಜನರ ಪ್ರಾಣ ರಕ್ಷಣೆಯೇ ಸರ್ಕಾರದ ಆದ್ಯತೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಸಹಕಾರ ನೀಡಬೇಕು
-ಅರವಿಂದ ಕೇಜ್ರಿವಾಲ್, ಮುಖ್ಯಮಂತ್ರಿ, ದೆಹಲಿ.
* ಅಜಿರಾಬಾದ್, ಚಂದ್ರವಾಲ್, ಓಖ್ಲಾ ನೀರು ಶುದ್ಧೀಕರಣ ಘಟಕ ಜಲಾವೃತಗೊಂಡಿದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಶೇ 25ರಷ್ಟು ವ್ಯತ್ಯಯ ಸಾಧ್ಯತೆ
* ಹಥಿನಿಕುಂಡ್ ಬ್ಯಾರೇಜ್‌ನಿಂದ ಹೊರ ಹರಿವು 80 ಸಾವಿರ ಕ್ಯೂಸೆಕ್ ಇದ್ದು, ಶುಕ್ರವಾರ ಬೆಳಿಗ್ಗೆ 3ಗಂಟೆಗೆ ನದಿಯ ನೀರಿನ ಮಟ್ಟ 208.45 ಮೀಟರ್‌ಗೆ ಇಳಿಯುವ ನಿರೀಕ್ಷೆ
* ನಾಲ್ಕೂ ಗಡಿ ಭಾಗಗಳ ಮೂಲಕ ದೆಹಲಿ ಪ್ರವೇಶಿಸಿದಂತೆ ಭಾರೀ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ
* ಐತಿಹಾಸಿಕ ಕೆಂಪು ಕೋಟೆ ಗೋಡೆಯ ಬಳಿ ಸೃಷ್ಟಿಯಾದ ಪ್ರವಾಹ. ರಾಜ್‌ಘಾಟ್, ಪುರಾಣ ಖಿಲಾ ಪ್ರದೇಶಗಳೂ ಜಲಾವೃತ
* ಸರ್ಕಾರಿ ಸುಶ್ರುತ ಟ್ರಾಮಾ ಕೇಂದ್ರದ ಮುಖ್ಯದ್ವಾರವೂ ಮುಳುಗಡೆಯಾಗಿದ್ದು, 40 ರೋಗಿಗಳು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಸ್ಥಳಾಂತರ
* ದೆಹಲಿ ಪಾರ್ಕ್, ಗೀತಾ ಘಾಟ್ ಬಳಿಯ ಶೆಲ್ಟರ್‌ಗಳ ಸ್ಥಳಾಂತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.