ADVERTISEMENT

Delhi Floods | ಗರಿಷ್ಠ ಮಟ್ಟಕ್ಕೇರಿದ ಯಮುನಾ ನದಿ ಹರಿವು: ದೆಹಲಿ ರಸ್ತೆಗಳು ಜಲಾವೃತ

ಪಿಟಿಐ
Published 13 ಜುಲೈ 2023, 5:11 IST
Last Updated 13 ಜುಲೈ 2023, 5:11 IST
ಯಮುನಾ ನದಿ ನೀರಿನ ಪ್ರವಾಹದಿಂದ ರಸ್ತೆಗಳು ಜಲಾವೃತಗೊಂಡಿವೆ
ಯಮುನಾ ನದಿ ನೀರಿನ ಪ್ರವಾಹದಿಂದ ರಸ್ತೆಗಳು ಜಲಾವೃತಗೊಂಡಿವೆ    ಪಿಟಿಐ ಚಿತ್ರ

ನವದೆಹಲಿ: ಉಕ್ಕಿ ಹರಿಯುತ್ತಿರುವ ಯಮುನಾ ನದಿ ಹರಿವು ಗುರುವಾರ ಬೆಳಗ್ಗೆ ಗರಿಷ್ಠ ಮಟ್ಟಕ್ಕೆ ಏರಿದ್ದು, ತೀರ ಸಮೀಪದ ಪ್ರದೇಶಗಳಲ್ಲಿನ ರಸ್ತೆಗಳು, ಸಾರ್ವಜನಿಕ ಹಾಗೂ ಖಾಸಗಿ ಮೂಲಸೌಕರ್ಯಗಳು ಜಲಾವೃತಗೊಂಡಿವೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೀರಿನ ಪ್ರಮಾಣ ಹಳೇ ರೈಲು ಸೇತುವೆ ಬಳಿ ಬುಧವಾರ ರಾತ್ರಿ 208 ಮೀಟರ್‌ಗೆ ತಲುಪಿತ್ತು. ಆ ಪ್ರಮಾಣ ಇಂದು ಬೆಳಗ್ಗೆ 8ರ ಹೊತ್ತಿಗೆ 208.48 ಮೀಟರ್‌ಗೆ ಏರಿದೆ. ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದಿರುವ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ), 'ಇದು ಮಿತಿ ಮೀರಿದ ಪರಿಸ್ಥಿತಿ' ಎಂದು ಆತಂಕ ವ್ಯಕ್ತಪಡಿಸಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ಪರಿಸ್ಥಿತಿ ನಿಯಂತ್ರಣ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಬುಧವಾರ ಆಗ್ರಹಿಸಿದ್ದಾರೆ. ಜನರು ಕಾನೂನುಬಾಹಿರವಾಗಿ ಗುಂಪುಗೂಡುವುದನ್ನು ತಡೆಯಲು ನಗರ ಪೊಲೀಸರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಸೆಕ್ಷನ್‌ 144 (ನಿಷೇಧಾಜ್ಞೆ) ಜಾರಿಗೊಳಿಸಬೇಕು ಎಂದಿದ್ದಾರೆ.

ADVERTISEMENT

‘ದೆಹಲಿಯಲ್ಲಿ ಎರಡು ದಿನದಿಂದಲೂ ಮಳೆಯಾಗಿಲ್ಲ. ಹರಿಯಾಣದ ಹಥಿನೀಕುಂಡ್‌ ಬ್ಯಾರೇಜ್‌ನಿಂದ ಅಸಹಜವಾಗಿ ಹೆಚ್ಚು ನೀರನ್ನು ಬಿಡುಗಡೆ ಮಾಡುತ್ತಿರುವುದರಿಂದ ಯಮುನೆಯ ಮಟ್ಟ ಹೆಚ್ಚಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನೀರಿನ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಬೇಕು’ ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೇಜ್ರಿವಾಲ್‌ ಪತ್ರ ಬರೆದಿದ್ದಾರೆ. ಕೆಲವೇ ವಾರಗಳಲ್ಲಿ ದೆಹಲಿಯಲ್ಲಿ ಜಿ20 ಸಮ್ಮೇಳನ ನಡೆಯಲಿದೆ ಎಂಬುದನ್ನು ಉಲ್ಲೇಖಿಸಿರುವ ಅವರು, ಹರಿಯಾಣದ ಹಥಿನೀಕುಂಡ್‌ ಬ್ಯಾರೇಜ್‌ನಿಂದ ನಿಧಾನವಾಗಿ ನೀರು ಹರಿಸುವಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಾಗೆಯೇ, 'ರಾಷ್ಟ್ರ ರಾಜಧಾನಿಯಲ್ಲಿ ಪ್ರವಾಹ ಉಂಟಾಗಿರುವುದು ವಿಶ್ವಕ್ಕೆ ಉತ್ತಮ ಸಂದೇಶವಲ್ಲ. ನಾವೆಲ್ಲರೂ ಒಂದಾಗಿ ಈ ಪರಿಸ್ಥಿತಿಯಿಂದ ದೆಹಲಿ ಜನರನ್ನು ಕಾಪಾಡಬೇಕಿದೆ' ಎಂದು ಹೇಳಿದ್ದಾರೆ.

ಲೆಫ್ಟಿನೆಂಟ್‌ ಗೌವರ್ನರ್‌ ವಿ.ಕೆ.ಸಕ್ಸೇನಾ ಅವರೂ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.