ADVERTISEMENT

ಸಂವಿಧಾನ ಬದಲಿಸುವ ಮೋದಿ–ಶಾ ಅವರ ಪ್ರಯತ್ನವನ್ನು ಜನ ಸಹಿಸುವುದಿಲ್ಲ: ರಾಹುಲ್ ಗಾಂಧಿ

ಪಿಟಿಐ
Published 11 ಜೂನ್ 2024, 16:14 IST
Last Updated 11 ಜೂನ್ 2024, 16:14 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಲಖನೌ: ನರೇಂದ್ರ ಮೋದಿ ಅವರು ತಮ್ಮ ಒಂದು ದಶಕದ ಆಡಳಿತಾವಧಿಯಲ್ಲಿ ಪ್ರಧಾನಿ ಹುದ್ದೆಯ ಘನತೆಯನ್ನು ಕುಂದಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದರು. 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಮೂಲಕ ಜನ, ಮೋದಿ ಅವರ ರಾಜಕೀಯ ಮತ್ತು ಕೆಲಸ ತಮಗೆ ಇಷ್ಟವಾಗಿಲ್ಲ ಎನ್ನುವ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.

ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ರಾಯ್‌ಬರೇಲಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಜನ ಬಿಜೆಪಿ ವಿರುದ್ಧ ನೀಡಿರುವ ತೀರ್ಪು ಎಂಥದ್ದು ಎಂದರೆ, ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅವರೂ ಕೂಡ ಪ್ರಯಾಸದಿಂದ ಗೆದ್ದಿದ್ದಾರೆ. ವಾರಾಣಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅವರೇನಾದರೂ ಸ್ಪರ್ಧಿಸಿದ್ದರೆ ಮೋದಿ 2–3 ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು’ ಎಂದು ಪ್ರತಿಪಾದಿಸಿದರು.

ADVERTISEMENT

‘ಸಂವಿಧಾನವನ್ನು ಬದಲಿಸಲು ಹೊರಟಿದ್ದ ಬಿಜೆಪಿಯ ವಿರುದ್ಧ ದೇಶದ ಜನ ಒಟ್ಟಾಗಿದ್ದಾರೆ’ ಎಂದಿರುವ ಅವರು, ‘ಸಂವಿಧಾನವನ್ನು ಬದಲಿಸುವ ಮೋದಿ, ಅಮಿತ್ ಶಾ ಅವರ ಯಾವುದೇ ಪ್ರಯತ್ನವನ್ನು ಜನ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಮೊದಲ ಬಾರಿಗೆ ದೇಶದ ಪ್ರಧಾನಿ ಬಹಿರಂಗವಾಗಿ ದ್ವೇಷ ಮತ್ತು ಹಿಂಸೆಯ ರಾಜಕಾರಣದಲ್ಲಿ ತೊಡಗಿದ್ದರು. ಇದು ನಮ್ಮ ಸಂಸ್ಕೃತಿಗೆ ವಿರುದ್ಧ. ಉತ್ತರ ಪ್ರದೇಶದ ಜನ ದೇಶಕ್ಕೆ ಒಂದು ದಾರಿಯನ್ನು ತೋರಿದರು. ಅವರು ದ್ವೇಷ ಮತ್ತು ಹಿಂಸೆಯ ರಾಜಕಾರಣದ ವಿರುದ್ಧ ಮತ ಚಲಾಯಿಸಿದರು’ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಬಿಜೆಪಿ ಸೋತ ಬಗ್ಗೆ ಪ್ರಸ್ತಾಪಿಸಿದ ಅವರು, ‘ಅಯೋಧ್ಯೆಯ ಜನ ಮೋದಿ ಅವರಿಗೆ ಒಂದು ಸಂದೇಶ ಕಳಿಸಿದ್ದಾರೆ. ಕೇವಲ ಕೋಟ್ಯಧಿಪತಿಗಳನ್ನು, ಗಣ್ಯರನ್ನು ಮಾತ್ರವೇ ರಾಮ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನಿಸಲಾಗಿತ್ತು. ಆದಿವಾಸಿ ಸಮುದಾಯದ ನಮ್ಮ ರಾಷ್ಟ್ರಪತಿಯವರನ್ನೂ ಕೂಡ ಆಹ್ವಾನಿಸಿರಲಿಲ್ಲ’ ಎಂದು ಟೀಕಿಸಿದರು.

ಮೋದಿ ಸಂಪುಟ ‘ಕುಟುಂಬ ಮಂಡಲ’

ನವದೆಹಲಿ: ಕುಟುಂಬ ರಾಜಕಾರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ 3.0 ಸರ್ಕಾರದ ಹಲವು ಸಚಿವರು ರಾಜಕೀಯ ಹಿನ್ನೆಲೆಯ ಕುಟುಂಬಗಳಿಂದ ಬಂದಿದ್ದು ಕೇಂದ್ರ ಮಂತ್ರಿ ಮಂಡಲವು ‘ಕುಟುಂಬ ಮಂಡಲ’ ಆಗಿದೆ ಎಂದು ಮಂಗಳವಾರ ಹೇಳಿದರು.

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಮಾತಿಗೂ ಕೃತಿಗೂ ನಡುವೆ ಇರುವ ವ್ಯತ್ಯಾಸದ ಹೆಸರೇ ನರೇಂದ್ರ ಮೋದಿ’ ಎಂದು ಟೀಕಿಸಿದ್ದಾರೆ.  ರಾಹುಲ್ ಅವರು ತಮ್ಮ ಪೋಸ್ಟ್‌ನಲ್ಲಿ ಕುಟುಂಬ ರಾಜಕಾರಣಕ್ಕೆ ನಿದರ್ಶನವಾಗಿ ಎಚ್‌.ಡಿ.ಕುಮಾರಸ್ವಾಮಿ ಜ್ಯೋತಿರಾದಿತ್ಯ ಸಿಂಧಿಯಾ ಕಿರಣ್ ರಿಜಿಜು ರಕ್ಷಾ ಖಡ್ಸೆ ಜಯಂತ್ ಚೌಧರಿ ರಾಮ್‌ನಾಥ್ ಠಾಕೂರ್ ರಾಮ್‌ಮೋಹನ್ ನಾಯ್ಡು ಜಿತಿನ್ ಪ್ರಸಾದ್ ಮುಂತಾದವರನ್ನು ಹೆಸರಿಸಿದ್ದು ಇವರನ್ನು ‘ಕುಟುಂಬ ಮಂಡಲ’ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.