ADVERTISEMENT

ಎನ್‌ಡಿಎ ಮೈತ್ರಿಕೂಟ ಅಲ್ಲ; ಪರಿವಾರ ಮಂಡಲ: ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ

ಪಿಟಿಐ
Published 11 ಜೂನ್ 2024, 13:26 IST
Last Updated 11 ಜೂನ್ 2024, 13:26 IST
ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ
ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ   

‌ನವದೆಹಲಿ: ಕುಟುಂಬ ರಾಜಕಾರಣ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎನ್‌ಡಿಎ ಮೈತ್ರಿಕೂಟವನ್ನು ‘ಪರಿವಾರ ಮಂಡಲ’ ಎಂದು ಕರೆದಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ತಲೆಮಾರುಗಳ (ಕಾಂಗ್ರೆಸ್‌) ಹೋರಾಟ, ಸೇವೆ ಮತ್ತು ತ್ಯಾಗವನ್ನು ಸ್ವಜನಪಕ್ಷಪಾತ ಎಂದು ಕರೆಯುವವರು ಇಂದು ಅಧಿಕಾರವನ್ನು ತಮ್ಮ ಸರ್ಕಾರಿ ಕುಟುಂಬಕ್ಕೆ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾತು ಮತ್ತು ಕಾರ್ಯದಲ್ಲಿನ ಈ ವ್ಯತ್ಯಾಸವನ್ನೇ ನರೇಂದ್ರ ಮೋದಿ ಎಂದು ಕರೆಯಲಾಗುತ್ತದೆ ಎಂದು ರಾಹುಲ್‌ ಹೇಳಿದ್ದಾರೆ.

ADVERTISEMENT

ಹೊಸದಾಗಿ ರಚನೆಗೊಂಡಿರುವ ಪ್ರಧಾನಿ ಮೋದಿ 3.0 ಸರ್ಕಾರದಲ್ಲಿ ರಾಜಕೀಯ ಕುಟುಂಬ ಹಿನ್ನೆಲೆ ಹೊಂದಿರುವ ಕೆಲವು ಸಚಿವರ ಹೆಸರುಗಳ ಪಟ್ಟಿಯನ್ನು ರಾಹುಲ್‌ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

  • ಎಚ್‌. ಡಿ ಕುಮಾರಸ್ವಾಮಿ – ಎಚ್‌.ಡಿ ದೇವೇಗೌಡ ಅವರ ಪುತ್ರ

  • ಜ್ಯೋತಿರಾಧಿತ್ಯ ಸಿಂಧಿಯಾ – ಮಾಜಿ ಕೇಂದ್ರ ಸಚಿವ ಮಾಧವ್‌ ರಾವ್‌ ಸಿಂಧಿಯಾ ಅವರ ಪುತ್ರ

  • ಕಿರಣ್‌ ರಿಜಿಜು – ಅರುಣಾಚಲ ಪ್ರದೇಶದ ಮೊದಲ ಹಂಗಾಮಿ ಸ್ಪೀಕರ್‌ ರಿಂಚಿನ್‌ ಖರು ಅವರ ಪುತ್ರ

  • ರಕ್ಷಾ ಖಡಸೆ – ಮಹಾರಾಷ್ಟ್ರ ಮಾಜಿ ಸಚಿವ ಏಕನಾಥ ಖಡಸೆ ಅವರ ಸೊಸೆ

  • ಜಯಂತ್‌ ಚೌಧರಿ – ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಮೊಮ್ಮಗ

  • ಚಿರಾಗ್‌ ಪಾಸ್ವಾನ್‌ – ಮಾಜಿ ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ಪುತ್ರ

  • ಜೆ. ಪಿ ನಡ್ಡಾ – ಮಧ್ಯಪ್ರದೇಶದ ಮಾಜಿ ಸಂಸದ ಮತ್ತು ಸಚಿವ ಜಯ್‌ಶ್ರೀ ಬ್ಯಾನರ್ಜಿ ಅವರ ಅಳಿಯ

  • ರಾಮ್‌ನಾಥ್‌ ಠಾಕೂರ್ – ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌

  • ರಾಮ್‌ಮೋಹನ್‌ ನಾಯ್ಡು – ಮಾಜಿ ಕೇಂದ್ರ ಸಚಿವ ಯರ್ರನ್ ನಾಯ್ಡು ಅವರ ಪುತ್ರ

  • ಜಿತಿನ್‌ ಪ್ರಸಾದ್‌ – ಮಾಜಿ ಸಂಸದ ಜಿತೇಂದ್ರ ಪ್ರಸಾದ್‌ ಅವರ ಪುತ್ರ

  • ಪೀಯೂಷ್‌ ಗೋಯಲ್‌ – ಮಾಜಿ ಕೇಂದ್ರ ಸಚಿವ ವೇದ ಪ್ರಕಾಶ್‌ ಗೋಯಲ್‌ ಅವರ ಪುತ್ರ

ಇದು ಪ್ರಧಾನಿ ಮೋದಿ ಅವರ ಎನ್‌ಡಿಎ ಮೈತ್ರಿಕೂಟದ ‘ಪರಿವಾರ ಮಂಡಲ’ ಎಂದು ರಾಹುಲ್‌ ಹೇಳಿದ್ದಾರೆ.

ಕಾಂಗ್ರೆಸ್‌ ಕುಟುಂಬ ರಾಜಕೀಯ ನಡೆಸುತ್ತಿದೆ ಎಂದು ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಹುಲ್‌ ಗಾಂಧಿ ಅವರು ಈ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.