ಲಖನೌ:2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಗ್ಗಟ್ಟಾಗಲು ಸಜ್ಜಾಗುತ್ತಿದ್ದಂತೆ ಬಿಎಸ್‍ಪಿ ನಾಯಕರೊಬ್ಬರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಬಿಎಸ್‍ಪಿಯ ರಾಷ್ಟ್ರೀಯ ಸಂಯೋಜಕ ಜೈ ಪ್ರಕಾಶ್ ಸಿಂಗ್ ಸೋಮವಾರ ತಮ್ಮ ಪಕ್ಷದ ಸಭೆಯೊಂದರಲ್ಲಿ ರಾಹುಲ್ ವಿರುದ್ಧ ಮಾತುಗಳನ್ನಾಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.
ಜೈ ಪ್ರಕಾಶ್ ಸಿಂಗ್ ಹೇಳಿದ್ದೇನು?
ರಾಹುಲ್ ಗಾಂಧಿ ಅವರಪ್ಪ ರಾಜೀವ್ ಗಾಂಧಿಯಂತೆ ಇರುತ್ತಿದ್ದರೆ ಅವರ ಮೇಲೆ ಸ್ವಲ್ಪವಾದರೂ ಭರವಸೆ ಇರುತ್ತಿತ್ತು.ಆದರೆ ರಾಹುಲ್ ಅವರ ಅಮ್ಮ, ವಿದೇಶಿ ಮಹಿಳೆಯ ಹಾದಿಯನ್ನು ತುಳಿಯುತ್ತಿದ್ದಾರೆ.ಹಾಗಾಗಿ ಅವರು ರಾಷ್ಟ್ರ ರಾಜಕಾರಣದಲ್ಲಿ ಯಶಸ್ವಿಯಾಗುವುದಿಲ್ಲ.ಮಹಾರಾಣಿಗೆ ಹುಟ್ಟಿದವರೆಲ್ಲರೂ ರಾಜರಾಗುವುದಿಲ್ಲ. ಮುಂದಿನ ನಾಯಕ ಪೇಟ್ (ಹೊಟ್ಟೆ)ಯಿಂದ ಹುಟ್ಟುವುದಿಲ್ಲ, ಪೇಟಿ (ಮತ ಪೆಟ್ಟಿಗೆ)ಯಿಂದ ಹುಟ್ಟುತ್ತಾರೆ ಎಂದಿದ್ದರು.
ಜೈ ಪ್ರಕಾಶ್ ವಿರುದ್ಧ ಕ್ರಮ
ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿರುವ ಜೈಪ್ರಕಾಶ್ ಅವರನ್ನು ಪ್ರಸ್ತುತ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ಬಿಎಸ್‍ಪಿ ರಾಷ್ಟ್ರೀಯ ಸಂಯೋಜಕ ಜೈ ಪ್ರಕಾಶ್ ಸಿಂಗ್ ಅವರು ತಮ್ಮ ಭಾಷಣದಲ್ಲಿ ಬಿಎಸ್‌ಪಿ ಸಿದ್ದಾಂತಗಳ ವಿರುದ್ದ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ವಿಪಕ್ಷಗಳ ನಾಯಕತ್ವದ ಬಗ್ಗೆ ವೈಯಕ್ತಿಕ ಟೀಕೆಯನ್ನೂ ಮಾಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಆಗಿದೆ. ಹಾಗಾಗಿ ಅವರನ್ನು ಪ್ರಸ್ತುತ ಸ್ಥಾನದಿಂದೆ ತೆಗೆದು ಹಾಕಲಾಗಿದೆ ಎಂದು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.