ADVERTISEMENT

ಜೀವ ಬೆದರಿಕೆ: ವೈ.ಎಸ್‌. ಶರ್ಮಿಳಾ ಬೆನ್ನಿಗೆ ನಿಂತ ರಾಹುಲ್ ಗಾಂಧಿ

ಪಿಟಿಐ
Published 4 ಫೆಬ್ರುವರಿ 2024, 2:53 IST
Last Updated 4 ಫೆಬ್ರುವರಿ 2024, 2:53 IST
   

ನವದೆಹಲಿ: ಆಂಧ್ರಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಮತ್ತು ಪಕ್ಷದ ನಾಯಕಿ ಸುನೀತಾ ರೆಡ್ಡಿ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಜೀವ ಬೆದರಿಕೆ ಹಾಕಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೊಂದು ಹೀನ ಕೃತ್ಯ ಎಂದು ಕಿಡಿಕಾರಿದ್ದಾರೆ.

‘ಕಾಂಗ್ರೆಸ್ ಪಕ್ಷವು ಶರ್ಮಿಳಾ ಮತ್ತು ಸುನೀತಾ ಅವರ ಬೆನ್ನಿಗೆ ನಿಂತಿದ್ದು, , ಇಂತಹ ಹೇಯ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ. ಮಹಿಳೆಯರನ್ನು ಅವಮಾನಿಸುವುದು, ಅವರಿಗೆ ಬೆದರಿಕೆ ಒಡ್ಡುವುದು ಹೇಡಿತನದ ಕೃತ್ಯವಾಗಿದ್ದು, ದುರ್ಬಲರ ಆಯುಧವಾಗಿದೆ’ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ರಾಹುಲ್‌ ಬರೆದುಕೊಂಡಿದ್ದಾರೆ.

‘ಶರ್ಮಿಳಾ ಮತ್ತು ಸುನೀತಾ ಅವರನ್ನು ಅವಮಾನಿಸಿ ಅವರಿಗೆ ಕೊಲೆ ಬೆದರಿಕೆ ಒಡ್ಡುವುದು, ಟ್ರೋಲ್‌ ಮಾಡುವುದು ನಿಜಕ್ಕೂ ದುರದೃಷ್ಟಕರ. ಇದು ವೈ.ಎಸ್.ರಾಜಶೇಖರ್ ಅವರಿಗೆ ಮಾಡುವ ಅವಮಾನವಾಗಿದೆ. ಇಂತಹ ನಡೆಯನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ’ ಎಂದು ಹಿರಿಯ ನಾಯಕ ಕೆ.ಸಿ ವೇಣುಗೋಪಾಲ ಹೇಳಿದ್ದಾರೆ.

ADVERTISEMENT

‘ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ಸುನೀತಾ ರೆಡ್ಡಿ ಅವರು ಹೈದರಾಬಾದ್‌ನ ಗಚಿಬೌಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ’ ಎಂದು ಮಾಜಿ ಕೇಂದ್ರ ಸಚಿವ ಎಂ.ಎಂ. ಪಲ್ಲಂ ರಾಜು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.