ನವದೆಹಲಿ: ಬಿಜೆಪಿ ಯುವ ಮೋರ್ಚಾದ ಕಾರ್ಯಕ್ರಮದಲ್ಲಿ ಭಾರತದ ಪುರುಷರ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಭಾಗಿಯಾಗಲಿದ್ದಾರೆ ಎಂಬ ವರದಿಗಳನ್ನು ಸ್ವತಃ ದ್ರಾವಿಡ್ ತಳ್ಳಿ ಹಾಕಿದ್ದಾರೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಅವರು ಮೇ 12ರಿಂದ ಭಾಗಿಯಾಗುವ ಸಾಧ್ಯತೆ ಇರುವುದಾಗಿ ಹಿಮಾಚಲ ಪ್ರದೇಶ ಧರ್ಮಶಾಲಾದ ಬಿಜೆಪಿ ಶಾಸಕ ವಿಶಾಲ್ ನಹೇರಿಯಾ ಇಂದು ಹೇಳಿದ್ದರು.
ಆ ಕುರಿತ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ರಾಹುಲ್ ದ್ರಾವಿಡ್, 'ಹಿಮಾಚಲ ಪ್ರದೇಶದಲ್ಲಿ 2022ರ ಮೇ 12ರಿಂದ 15ರವರೆಗೂ ನಡೆಯುತ್ತಿರುವ ಸಭೆಯಲ್ಲಿ ನಾನು ಭಾಗಿಯಾಗುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ವರದಿಗಳು ತಪ್ಪು ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ' ಎಂದಿರುವುದು ವರದಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ. ಈ ನಡುವೆ ಬಿಜೆಪಿಯ ಯುವ ಮೋರ್ಚಾ ಸಹ ಕಾರ್ಯಕ್ರಮ ಆಯೋಜಿಸಿದೆ.
'ಧರ್ಮಶಾಲಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ. ದ್ರಾವಿಡ್ ಅವರು ಪಾಲ್ಗೊಳ್ಳುವುದರಿಂದ ಯುವಕರಿಗೆ ಸಂದೇಶ ರವಾನಿಸಿದಂತಾಗುತ್ತದೆ. ರಾಜಕೀಯ ಮಾತ್ರವೇ ಅಲ್ಲದೆ ಇತರೆ ಕ್ಷೇತ್ರಗಳಲ್ಲಿಯೂ ಮುಂದುವರಿಯಬಹುದು ಎಂಬುದನ್ನು ಹೇಳಿದಂತಾಗುತ್ತದೆ' ಎಂದು ವಿಶಾಲ್ ನಹೇರಿಯಾ ಹೇಳಿದ್ದರು.
ಈ ವರ್ಷ ಉತ್ತರ ಪ್ರದೇಶ, ಗೋವಾ, ಮಣಿಪುರ ಹಾಗೂ ಉತ್ತರಾಖಂಡದಲ್ಲಿ ಜಯಭೇರಿ ಸಾಧಿಸಿರುವ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ನವೆಂಬರ್–ಡಿಸೆಂಬರ್‌ನಲ್ಲಿ ನಡೆಯುವ ಚುನಾವಣೆಗೆ ಸಜ್ಜಾಗುತ್ತಿದೆ.
2017ರಲ್ಲಿ ಬಿಜೆಪಿಯು 68 ಸ್ಥಾನಗಳ ಪೈಕಿ 44ರಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಪಕ್ಷವು 21 ಸ್ಥಾನಗಳಿಗೆ ಕುಸಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.