ನವದೆಹಲಿ: ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯೊಂದಿಗೆ ಚುನಾವಣೆ ಎದುರಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಆದಾಗ್ಯೂ, ಆ ಪಕ್ಷದ ಸಾಮಾಜಿಕ ಮಾಧ್ಯಮ ಘಟಕದ ಉಸ್ತುವಾರಿ ನಿಖಿಲ್ ಆಳ್ವಾ ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತು ಟ್ವಿಟರ್‌ನಲ್ಲಿ ಸಮೀಕ್ಷೆ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿರುವ ನಿಖಿಲ್ ಆಳ್ವಾ, ಟ್ವಿಟರ್ ಸಮೀಕ್ಷೆಯಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂದು ಪ್ರಶ್ನೆ ಕೇಳಿದ್ದು, ಸಿ.ಎಂ ಚರಣ್‌ಜಿತ್ ಸಿಂಗ್ ಚನ್ನಿ ಶೇ 69ರಷ್ಟು ಮತಗಳನ್ನು ಪಡೆದಿದ್ದಾರೆ. ಶೇ 12ರಷ್ಟು ನವಜೋತ್ ಸಿಂಗ್ ಸಿಧು ಹಾಗೂ ಶೇ 9ರಷ್ಟು ಮತಗಳನ್ನು ಸುನೀಲ್ ಜಾಖರ್ ಪಡೆದಿದ್ದಾರೆ.
ಸಮೀಕ್ಷೆಯಲ್ಲಿ ಒಟ್ಟು 1,283 ಮಂದಿ ಮತ ಚಲಾಯಿಸಿದ್ದಾರೆ.
ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿರುವ ಆಳ್ವಾ, ‘ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಇದೊಂದು ಉತ್ತಮ ವೇದಿಕೆಯಾಗಿದೆ’ ಎಂದಿದ್ದಾರೆ.
ಪಂಜಾಬ್‌ನಲ್ಲಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಸಾಧ್ಯತೆಗಳಿಲ್ಲ. ಸಾಮೂಹಿಕ ನಾಯಕತ್ವದೊಂದಿಗೆ ಚುನಾವಣೆ ಎದುರಿಸುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.
ಫೆಬ್ರುವರಿಯಲ್ಲಿ ಪಂಜಾಬ್ ವಿಧಾನಸಭೆಯ 117 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.