ನವದೆಹಲಿ: ಕೇರಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತದಾರರನ್ನು ಸೆಳೆಯುವಲ್ಲಿ ವಿಫಲರಾಗಿರುವುದು ಫಲಿತಾಂಶದಲ್ಲಿ ಗೋಚರಿಸಿದೆ.
ಲೋಕಸಭೆ ಚುನಾವಣೆ ಬಳಿಕ ಹಲವು ಸೋಲುಗಳನ್ನು ಅನುಭವಿಸಿ ಕಂಗೆಟ್ಟಿದ್ದ ಕಾಂಗ್ರೆಸ್‌ಗೆ, ಈ ರಾಜ್ಯಗಳ ಮತದಾರರು ಬೆಂಬಲಿಸುವ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದರು. ಇದರಿಂದ, ಪಕ್ಷದ ಪುನಃಶ್ಚೇತನಕ್ಕೂ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತಿತ್ತು.
ಅಸ್ಸಾಂ ಮತ್ತು ಕೇರಳದಲ್ಲಿ ಜಯಗಳಿಸಿದರೆ ರಾಹುಲ್ ಗಾಂಧಿ ಅವರನ್ನು ಮತ್ತೆ ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಪಕ್ಷದ ಹಲವು ನಾಯಕರು ಪ್ರತಿಪಾದಿಸಿದ್ದರು.
ಕೇರಳದಲ್ಲಿ ಪಕ್ಷ ಉತ್ತಮ ಪ್ರದರ್ಶನ ನೀಡಲಿದೆ ಎನ್ನುವ ನಿರೀಕ್ಷೆಯನ್ನು ರಾಹುಲ್ ಹೊಂದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಅಮೇಠಿಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದರೂ ಕೇರಳದ ವಯನಾಡು ಮತದಾರರು ‘ಕೈ’ ಹಿಡಿದಿದ್ದರು. ಹೀಗಾಗಿ, ಈ ರಾಜ್ಯದ ಮತದಾರರ ಬಗ್ಗೆ ಅಪಾರ ಭರವಸೆ ಹೊಂದಿದ್ದರು.
ತಮಿಳುನಾಡಿನಲ್ಲಿ ಸ್ಪರ್ಧಿಸಿದ್ದ 25 ಸ್ಥಾನಗಳ ಪೈಕಿ 17ರಲ್ಲಿ ಕಾಂಗ್ರೆಸ್ ಜಯಸಾಧಿಸಿದೆ. ಚುನಾವಣೆ ಪ್ರಚಾರ ಸಂದರ್ಭದಲ್ಲಿ ಈ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಮತದಾರರ ಜತೆ ಸಮಾಲೋಚನೆ ನಡೆಸುವ ಪ್ರಯತ್ನ ಮಾಡಿದ್ದರು. ಜಲ್ಲಿಕಟ್ಟುವಿನಲ್ಲೂ ಸಹ ಭಾಗವಹಿಸಿದ್ದರು. ಆದರೆ, ಸೀಟುಗಳ ಹಂಚಿಕೆ ಸಂದರ್ಭದಲ್ಲಿ ಡಿಎಂಕೆ ಕೇವಲ 25 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿತು. ಇದರಿಂದ, ರಾಹುಲ್ ಆಸಕ್ತಿ ಕಳೆದುಕೊಂಡರು ಎಂದು ವಿಶ್ಲೇಷಿಸಲಾಗಿದೆ.
ಈ ಚುನಾವಣಾ ಫಲಿತಾಂಶದಿಂದಾಗಿ, ಕಾಂಗ್ರೆಸ್‌ಗೆ ಪೂರ್ಣಾವಧಿಯಾಗಿ ಅಧ್ಯಕ್ಷರನ್ನು ನೇಮಿಸುವಂತೆ ಒತ್ತಾಯಿಸಿದ್ದ ಪಕ್ಷದ ‘ಜಿ–23’ ನಾಯಕರ ಬೇಡಿಕೆಗೂ ಬಲಬಂದಂತಾಗಿದೆ.
ಇತ್ತೀಚೆಗೆ, ಕಾಂಗ್ರೆಸ್ ಪಕ್ಷವು ಪಂಜಾಬ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಜಯಗಳಿಸಿತ್ತು. ಆದರೆ, ಈ ಗೆಲುವಿಗೆ ಬಲಿಷ್ಠವಾದ ಸ್ಥಳೀಯ ನಾಯಕರೇ ಕಾರಣರಾಗಿದ್ದರು ಎಂದು ವಿಶ್ಲೇಷಿಸಲಾಗಿತ್ತು.
ಮಹಾರಾಷ್ಟ್ರದಲ್ಲೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ದೃಷ್ಟಿಯಿಂದ ಶಿವಸೇನಾ, ಎನ್‌ಸಿಪಿ ಜತೆ ಕಾಂಗ್ರೆಸ್ ಕೈಜೋಡಿಸಬೇಕಾಯಿತು.
ಕೇರಳ ಮತ್ತು ಅಸ್ಸಾಂನಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ದೊರೆತಿಲ್ಲ. ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಪಕ್ಷ ಸಂಘಟನೆ ಬಗ್ಗೆ ಕ್ರಮಕೈಗೊಳ್ಳಲಿದ್ದೇವೆ.
-ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.