ಬೆಂಗಳೂರು: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ತನಿಖೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೇವಡಿ ಮಾಡಿದ್ದಾರೆ. ಈ ಸಂಬಂಧ ರಾಹುಲ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
‘ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಏಕೆ ಒಪ್ಪಿಸುತ್ತಿಲ್ಲ’ ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರಾಹುಲ್ ಅವರೇ ನಾಲ್ಕು ಉತ್ತರಗಳ ಆಯ್ಕೆಯನ್ನು ನೀಡಿದ್ದಾರೆ.
‘ಅಪರಾಧಿ ಪ್ರಜ್ಞೆ’ ಎಂಬುದು ಮೊದಲ ಆಯ್ಕೆ. ‘ಸ್ನೇಹಿತರನ್ನು ರಕ್ಷಿಸಬೇಕು’ ಎಂಬುದು ಎರಡನೇ ಆಯ್ಕೆ. ‘ಜೆಪಿಸಿಗೆ ರಾಜ್ಯಸಭಾ ಸೀಟಿನ ಅವಶ್ಯಕತೆ ಇಲ್ಲ’ ಎನ್ನುವುದು ಮೂರನೇ ಆಯ್ಕೆ. ‘ಮೇಲಿನ ಎಲ್ಲಾ ಉತ್ತರಗಳೂ ಸರಿ’ ಎಂಬುದು ನಾಲ್ಕನೇ ಆಯ್ಕೆ.
ಈ ಪ್ರಶ್ನೆಯನ್ನು ರಾಹುಲ್ ಗಾಂಧಿ ಅವರು ಟ್ವಿಟರ್‌ನಲ್ಲಿ ಮತಕ್ಕೆ ಹಾಕಿದ್ದರು. 74,733 ಮಂದಿ ಹಾಕಿರುವ ಮತಗಳ ಫಲಿತಾಂಶವೂ ಟ್ವೀಟ್‌ನಲ್ಲಿ ಪ್ರಕಟವಾಗಿದೆ.
ಅಪರಾಧಿ ಪ್ರಜ್ಞೆಯೇ ಕಾರಣ ಎಂದು ಶೇ 7ರಷ್ಟು ಜನರು ಮತ ಹಾಕಿದ್ದಾರೆ. ಸ್ನೇಹಿತರನ್ನು ರಕ್ಷಿಸಬೇಕು ಎಂಬ ಆಯ್ಕೆಗೆ ಶೇ 24.3ರಷ್ಟು ಜನರು ಮತ ಹಾಕಿದ್ದಾರೆ. ಜೆಪಿಸಿಗೆ ರಾಜ್ಯಸಭಾ ಸೀಟಿನ ಅವಶ್ಯಕತೆ ಇಲ್ಲ ಎಂಬ ಆಯ್ಕೆಯನ್ನು ಶೇ 5.6ರಷ್ಟು ಜನರು ಮಾತ್ರ ಮತ ಹಾಕಿದ್ದಾರೆ. ಶೇ 63.2ರಷ್ಟು ಜನರು ಮೇಲಿನ ಎಲ್ಲಾ ಉತ್ತರಗಳೂ ಸರಿ ಎಂಬ ಆಯ್ಕೆಗೆ ಮತ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.