ADVERTISEMENT

ಕಾಂಗ್ರೆಸ್ ಕೈ ಹಿಡಿದ ಜನರು: ರಾಹುಲ್‌‍ಗೆ ಅಚ್ಛೇ ದಿನ್ 

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 13:51 IST
Last Updated 11 ಡಿಸೆಂಬರ್ 2018, 13:51 IST
   

ಬೆಂಗಳೂರು: ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ ಇದ್ದು, ಛತ್ತೀಸಗಡದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.ಪಂಚ ರಾಜ್ಯಗಳಲ್ಲಿ ಮಧ್ಯ ಪ್ರದೇಶದ ಚುನಾವಣೆ ಫಲಿತಾಂಶ ನಿರ್ಣಾಯಕ ಪಾತ್ರ ವಹಿಸಲಿದೆ.ಇತ್ತ ರಾಜಸ್ಥಾನದಲ್ಲಿ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ತಿಳಿದಿತ್ತು.ವಸುಂಧರಾ ರಾಜೇ ಅವರೊಂದಿಗಿರುವ ಭಿನ್ನಮತವೇ ಇದಕ್ಕೆ ಕಾರಣ.ಆದರೆ ಮಧ್ಯ ಪ್ರದೇಶದಲ್ಲಿ ಹಾಗಿಲ್ಲ.ಇಲ್ಲಿ ಸೋತರೆ 2019ರ ಲೋಕಸಭಾ ಚುನಾವಣೆಯಲ್ಲಿ ಎದ್ದೇಳುವುದು ಕಷ್ಟ ಎಂಬುದು ಬಿಜೆಪಿಗೆ ಗೊತ್ತಿದೆ. ಅಂಥದೊಂದು ಭಯ ಬಿಜೆಪಿ ಪಾಳಯಕ್ಕಿದೆ. ಇಲ್ಲಿಯವರೆಗೆ ಪ್ರಕಟವಾಗಿರುವ ಫಲಿತಾಂಶ ಗಮನಿಸಿದರೆ ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದುಬರುತ್ತಿದೆ.

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಹೇಳಲಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್‍ಗೆ ಮಹಾ ಮೈತ್ರಿಕೂಟ ಬೇಕಿದೆ.ಈ ಮೈತ್ರಿಕೂಟದಲ್ಲಿ ಕಾರ್ಯಗಳನ್ನು ನಿರ್ಣಯಿಸುವ ಅಧಿಕಾರ ಸಿಗಬೇಕಾದರೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಗೆಲವು ಅನಿವಾರ್ಯವಾಗಿದೆ.ಮಹಾಮೈತ್ರಿಕೂಟದಲ್ಲಿ ಶರದ್ ಪವಾರ್, ಮಮತಾ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಯಾದವ್, ಚಂದ್ರಬಾಬು ನಾಯ್ಡು, ಸ್ಟಾಲಿನ್ ಮೊದಲಾದವರು ಇರುವಾಗ ಮೈತ್ರಿಕೂಟವನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ.

ಪ್ರತಿ ರಾಜ್ಯದಲ್ಲಿನ ಪ್ರಧಾನ ಪ್ರತಿಪಕ್ಷ ಮೈತ್ರಿಕೂಟದ ಚುಕ್ಕಾಣಿ ಹಿಡಿಯಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮಧ್ಯಪ್ರದೇಶದಲ್ಲಿ ಮಮತಾ ಕಾಂಗ್ರೆಸ್ ಕೈ ಬಿಟ್ಟು ಈ ಪ್ರಯೋಗಕ್ಕೆ ಮುಂದಾಗಿದ್ದರು. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‍ ಸೋಲುಂಡರೆ ಶರದ್ ಪವಾರ್ ಪಾಲಿಗೆ ಅದು ಉತ್ತಮ ಅವಕಾಶವಾಗುತ್ತದೆ.
ಬಿಜೆಪಿ ಬಗ್ಗೆ ಹೇಳುವುದಾದರೆ ಮಧ್ಯಪ್ರದೇಶ ಗೌರವದ ಪ್ರಶ್ನೆ. ಹಿಂದುತ್ವ ರಾಜಕಾರಣದ ಶಕ್ತಿ ಕೇಂದ್ರವಾದ ಇಲ್ಲಿ ಬಿಜೆಪಿ ಸೋಲಿನ ಹೊಣೆ ಹೊರಬೇಕಾಗಿರುವುದು ಆರ್‌ಎಸ್ಎಸ್ ಆಗಿದೆ.ಹಾಗಾಗಿ ಕಾಂಗ್ರೆಸ್ ಇಲ್ಲಿ ಚಾಣಾಕ್ಷತದಿಂದ ಕಾರ್ಯತಂತ್ರ ರೂಪಿಸಿತ್ತು.

ADVERTISEMENT

ಬಿಜೆಪಿಯ ಹಿಂದುತ್ವ ರಾಜಕೀಯವನ್ನು ಎದುರಿಸಲು ರಾಹುಲ್ ಶಿವಭಕ್ತಿಯನ್ನು ಅಸ್ತ್ರವಾಗಿರಿಸಿದರು. ಪಶು ಸಂರಕ್ಷಣೆಗಾಗಿ ಕಳೆದ ಎರಡು ವರ್ಷಗಳಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ₹45 ಕೋಟಿ ಖರ್ಚು ಮಾಡಿತ್ತು. ಗೋವುಗಳ ಬಗ್ಗೆಯೂ ಯೋಚಿಸಿದ ಕಾಂಗ್ರೆಸ್ ಎಲ್ಲ ಗ್ರಾಮಗಳಲ್ಲಿಯೂ ಗೋಶಾಲೆ ನಿರ್ಮಿಸುವುದಾಗಿ ಭರವಸೆ ನೀಡಿತ್ತು.

ಇತ್ತ ಕಾಂಗ್ರೆಸ್ ಕೂಡಾ ಮತದಾರರನ್ನು ಓಲೈಸಲು ಧಾರ್ಮಿಕ ಭಾವನೆಗಳನ್ನೂ ಬಳಸಿತು.ವನವಾಸ ಕಾಲದಲ್ಲಿ ಶ್ರೀರಾಮಚಂದ್ರ ನಡೆದಾಡಿದ ಜಾಗ ಎಂದು ಹೇಳುವ ದಾರಿಗಳನ್ನು ಅಭಿವೃದ್ದಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಷಯವನ್ನು ಬಿಜೆಪಿ ಅಜೆಂಡಾ ಮಾಡಿಕೊಂಡಾಗ ಕಾಂಗ್ರೆಸ್ ರಾಮ ನಡೆದ ದಾರಿಯ ಬಗ್ಗೆ ಯೋಚಿಸಿತು!. ರಾಮ ವನ್ ಗಮನ್ ಪಥ್ ಎಂಬ ಯೋಜನೆ ಜತೆ ನರ್ಮದಾ ನದಿಯ ರಕ್ಷಣೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿತ್ತು.

ಇಷ್ಟೇ ಅಲ್ಲ ಪಂಜಾಬ್‍ನಲ್ಲಿ ಮಾಡಿದಂತೆ 'ಓರ್ವ ನಾಯಕ'ನನ್ನು ಬಿಂಬಿಸಿ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಕಣಕ್ಕಿಳಿದಿರಲಿಲ್ಲ. ಕಮಲ್ ನಾಥ್, ದಿಗ್ವಿಜಯ್ ಸಿಂಗ್, ಜ್ಯೋತಿರಾಧಿತ್ಯ ಸಿಂಧ್ಯ ಮೊದಲಾದ ಮಹಾ ನಾಯಕರು ಇರುವಾಗ ಕಾಂಗ್ರೆಸ್‍ಗೆ ಅದು ಸಾಧ್ಯವಾಗುವ ಮಾತಲ್ಲ, ನರೇಂದ್ರ ಮೋದಿ ವಿರುದ್ಧ ಹೋರಾಡುವ ನಾಯಕ ರಾಹುಲ್ ಗಾಂಧಿ ಒಬ್ಬರೇ ಎಂದು ಕಾಂಗ್ರೆಸ್ ಸ್ಪಷ್ಟವಾಗಿ ಹೇಳಿತ್ತು, ಪ್ರಿಯಾಂಕಾರನ್ನು ಕರೆ ತನ್ನಿ, ಕಾಂಗ್ರೆಸ್ ರಕ್ಷಿಸಿ ಎಂಬ ಘೋಷಣೆಗೆ ಇಲ್ಲಿ ಅವಕಾಶವೂ ಇರಲಿಲ್ಲ. ಯಾಕೆಂದರೆ ಬಿಜೆಪಿಯವರು ಪಪ್ಪು ಎಂದು ಕರೆದು ಲೇವಡಿ ಮಾಡಿದ ರಾಹುಲ್ ಗಾಂಧಿ ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ 'ನಾಯಕ'ರಾಗಿ ಹೊರಹೊಮ್ಮಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.