ಕೊಲ್ಹಾಪುರ(ಮಹಾರಾಷ್ಟ್ರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೇಖಕ ಶಾಹು ಪಟೋಲೆ ಅವರೊಂದಿಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ದಲಿತ ದಂಪತಿ ಮನೆಗೆ ಭೇಟಿ ನೀಡಿದ್ದು, ದಲಿತ ಪಾಕ ಪದ್ಧತಿ ಮತ್ತು ಸಮುದಾಯ ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.
ಅಜಯ್ ತುಕಾರಾಂ ಸಾನಡೆ ದಂಪತಿ ಮನೆಗೆ ಭೇಟಿ ನೀಡಿರುವ ವಿಡಿಯೊವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ಅವರು ಏನು ತಿನ್ನುತ್ತಾರೆ, ಹೇಗೆ ಅಡುಗೆ ಮಾಡುತ್ತಾರೆ, ಅದರ ಸಾಮಾಜಿಕ ಮತ್ತು ರಾಜಕೀಯ ಮಹತ್ವ ಏನು ಎಂಬ ಕುತೂಹಲದೊಂದಿಗೆ ನಾನು ಅಜಯ್ ತುಕಾರಾಂ ಸಾನಡೆ ಮತ್ತು ಅವರ ಪತ್ನಿ ಅಂಜನಾ ಅವರೊಂದಿಗೆ ಇಂದಿನ ಮಧ್ಯಾಹ್ನವನ್ನು ಕಳೆದೆ’ ಎಂದು ಬರೆದುಕೊಂಡಿದ್ದಾರೆ.
‘ಕೊಲ್ಹಾಪುರದಲ್ಲಿರುವ ಅವರ(ಅಜಯ್ ತುಕರಾಂ) ಮನೆಗೆ ನನ್ನನ್ನು ಬಹಳ ಗೌರವದಿಂದ ಆಹ್ವಾನಿಸಿದರು. ಅಡುಗೆಯಲ್ಲಿ ಸಹಾಯ ಮಾಡಲು ನನಗೆ ಅವಕಾಶ ನೀಡಿದರು. ನಾವೆಲ್ಲ ಸೇರಿ ಹರಭಾರಿಯಾಚಿ ಭಜಿ, ತುವರ್ ದಾಲ್ ತಯಾರಿಸಿದೆವು’ ಎಂದಿದ್ದಾರೆ.
‘ಜಾತಿ ತಾರತಮ್ಯ ಮತ್ತು ಅಸ್ಪ್ರಶ್ಯತೆ ಕುರಿತಂತೆ ಪಟೋಲೆ ಮತ್ತು ಸಾನಡೆ ಅವರು ತಮ್ಮ ವೈಯಕ್ತಿಕ ಅನುಭವಗಳನನ್ನು ಹಂಚಿಕೊಂಡರು. ದಲಿತ ಪಾಕ ಪದ್ಧತಿ ಬಗೆಗಿನ ಅರಿವಿನ ಕೊರತೆ ಮತ್ತು ಅದನ್ನು ದಾಖಲಿಸುವಲ್ಲಿ ವಿಫಲರಾಗಿರುವ ಬಗ್ಗೆಯೂ ಚರ್ಚಿಸಿದೆವು’ ಎಂದು ಹೇಳಿದ್ದಾರೆ.
‘ಬಹುಜನರಿಗೆ ಸಂವಿಧಾನವು ಹಕ್ಕುಗಳನ್ನು ನೀಡಿದ್ದು, ನಾವು ಅದನ್ನು ರಕ್ಷಿಸಬೇಕಿದೆ. ಪ್ರತಿಯೊಬ್ಬ ಭಾರತೀಯನು ತನ್ನ ಹೃದಯದಲ್ಲಿ ಭ್ರಾತೃತ್ವವನ್ನು ಬೆಳೆಸಿಕೊಂಡಾಗ ಮಾತ್ರ ನಿಜವಾದ ಒಳಗೊಳ್ಳುವಿಕೆ ಮತ್ತು ಸಮಾನತೆ ಸಾಧ್ಯವಾಗುತ್ತದೆ’ ಎಂದು ಹೇಳಿದ್ದಾರೆ.
ಕೊನೆಯಲ್ಲಿ ದಲಿತ ದಂಪತಿಯೊಂದಿಗೆ ಭೋಜನ ಸವಿದ ರಾಹುಲ್ ಗಾಂಧಿ, ಸಮುದಾಯ ಎದುರುಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.
ಶಾಹು ಪಟೋಲೆ ಅವರ ‘ದಲಿತ್ ಕಿಚನ್ ಆಫ್ ಮರಾಠವಾಡ’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.