ಹಾಥರಸ್(ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಸಂಭವಿಸಿದ್ದ ಕಾಲ್ತುಳಿತ ದುರಂತದ ಸಂತ್ರಸ್ತರ ಕುಟುಂಬಕ್ಕೆ ಇಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ.
ಶುಕ್ರವಾರ ಮುಂಜಾನೆ ರಾಹುಲ್ ಗಾಂಧಿ ಅವರು ದೆಹಲಿಯಿಂದ ಉತ್ತರ ಪ್ರದೇಶದ ಹಾಥರಸ್‌ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಜಯ್ ರಾಯ್ ತಿಳಿಸಿದ್ದಾರೆ.
'ಇಂದು ಬೆಳಿಗ್ಗೆ 5.10ರ ಸುಮಾರಿಗೆ ರಾಹುಲ್ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ' ಎಂದು ಅಜಯ್ ರಾಯ್ ಮಾಹಿತಿ ನೀಡಿದ್ದಾರೆ.
ರಾಹುಲ್ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ, ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೆತ್ ಹಾಗೂ ಇತರೆ ಪದಾಧಿಕಾರಿಗಳು ಇರಲಿದ್ದಾರೆ.
ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಲಿರುವ ರಾಹುಲ್ ಗಾಂಧಿ, ಸಾಂತ್ವನ ಹೇಳಲಿದ್ದಾರೆ.
'ಹಾಥರಸ್ ದುರಂತವು ಉತ್ತರ ಪ್ರದೇಶದ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ನಿನ್ನೆ (ಗುರುವಾರ) ಮುಖ್ಯಮಂತ್ರಿ ಆದಿತ್ಯನಾಥ್ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟರು. ಬಳಿಕ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಘಟನಾ ಸ್ಥಳಕ್ಕೆ ತೆರಳಿದ್ದರು. ಇದು ಒಳಜಗಳವನ್ನು ತೋರಿಸುತ್ತದೆ' ಎಂದು ಹೇಳಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹1 ಕೋಟಿ ಹಾಗೂ ಗಾಯಾಳುಗಳಿಗೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಹಾಥರಸ್‌ನಲ್ಲಿ ಧಾರ್ಮಿಕ ಸಭೆಯ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರುಂತದಲ್ಲಿ 121 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ 112 ಮಹಿಳೆಯರು, 7 ಮಕ್ಕಳು ಸೇರಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದಲ್ಲಿ ಮೂವರು ಸದಸ್ಯರ ತನಿಖಾ ಸಮಿತಿಯನ್ನು ಉತ್ತರ ಪ್ರದೇಶದ ಸರ್ಕಾರ ರಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.