ಪಣಜಿ:ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಅವರನ್ನು ಮಂಗಳವಾರ ಭೇಟಿಯಾದರು.
ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಪರ್‍ರೀಕರ್ ಅವರನ್ನು ಟೀಕಿಸಿ ರಾಹುಲ್ ಗಾಂಧಿ ಸೋಮವಾರ ಟ್ವೀಟ್ ಮಾಡಿದ್ದರು. ಮರುದಿನವೇ ಉಭಯ ನಾಯಕರು ಭೇಟಿಯಾಗಿದ್ದಾರೆ.
‘ಬೇಗನೆ ಗುಣಮುಖರಾಗುವಂತೆ ಹಾರೈಸಲು ಇವತ್ತು ಬೆಳಿಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಅವರನ್ನು ಭೇಟಿಯಾದೆ. ಇದು ಖಾಸಗಿ ಭೇಟಿ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.ರಫೇಲ್‌ಗೆ ಸಂಬಂಧಿಸಿ ಪರ್‍ರೀಕರ್ ಜತೆ ರಾಹುಲ್ ಗಾಂಧಿ ಯಾವುದೇ ಚರ್ಚೆ ನಡೆಸಿಲ್ಲ ಎಂದು ಕಾಂಗ್ರೆಸ್‌ನ ಗೋವಾ ಘಟಕ ತಿಳಿಸಿದೆ.
ಇದೊಂದು ಖಾಸಗಿ ಭೇಟಿ. ಆ ವಿಚಾರ (ರಫೇಲ್) ಚರ್ಚೆಯಾಗಿಲ್ಲ. ಮುಂದಿನ ತಿಂಗಳು ರಾಹುಲ್ ಗಾಂಧಿ ಗೋವಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಚಂದ್ರಕಾಂತ್ ಕವಲೇಕರ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಆಡಿಯೊ ಟೇಪ್ ಬಹಿರಂಗವಾಗಿ ಮೂವತ್ತು ದಿನಗಳಾಗಿವೆ. ಯಾವುದೇ ಎಫ್‌ಐಆರ್ ದಾಖಲಾಗಿಲ್ಲ, ತನಿಖೆಗೂ ಆದೇಶಿಸಲಾಗಿಲ್ಲ. ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆಡಿಯೊ ಟೇಪ್ ಅಧಿಕೃತವೆಂಬುದು ದೃಢ. ರಫೇಲ್‌ನ ರಹಸ್ಯ ದಾಖಲೆಗಳು ಪರ್‍ರೀಕರ್ ಬಳಿ ಇದ್ದು ಅದು ಅವರಿಗೆ ಪ್ರಧಾನಿಯವರಿಗಿಂತಲೂ ಹೆಚ್ಚಿನ ಅಧಿಕಾರ ನೀಡಿದೆ’ ಎಂದು ರಾಹುಲ್ ಗಾಂಧಿ ಸೋಮವಾರ ಟ್ವೀಟ್ ಮಾಡಿದ್ದರು.
ರಫೇಲ್ ಕಡತಗಳನ್ನು ಪರ್‍ರೀಕರ್ ಅವರು ತಮ್ಮ ಶಯನಗೃಹದಲ್ಲಿ ಇರಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಈ ಹಿಂದೆಯೂ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.