ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನದ ಬೆನ್ನಲ್ಲೇ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು ರಾಹುಲ್ ಗಾಂಧಿ ಅವರನ್ನು ಖಂಡಿಸಿದ್ದಾರೆ.
‘ಮೂರನೇ ಬಾರಿ ವಿಫಲರಾಗಿರುವ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮೇಲೆ ಹಿಂಸಾಚಾರವನ್ನು ಪ್ರೋತ್ಸಾಹಿಸಿ, ಸಮರ್ಥಿಸಿದ್ದಾರೆ. ಪಂಜಾಬಿನಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಪೊಲೀಸರು ಉದ್ದೇಶಪೂರ್ವಕವಾಗಿಯೇ ಪ್ರಧಾನಿಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದರು. ಇದರಿಂದ ಪ್ರಧಾನಿಯ ಬೆಂಗಾವಲು ಪಡೆ ಮೇಲ್ಸೇತುವೆ ಮೇಲೆ ಸಿಲುಕಿಕೊಂಡಿತ್ತು. ಇದನ್ನು ಭಾರತ ಹೇಗೆ ಮರೆಯುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ಮೋದಿ ಅವರನ್ನು ‘ಸರ್ವಾಧಿಕಾರಿ’ ಎಂದು ಟೀಕಿಸಿದ್ದಾರೆ. ಇದೇ ರೀತಿಯ ಟೀಕೆಗಳನ್ನು ಟ್ರಂಪ್ ವಿರುದ್ಧ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮಾಡಿದ್ದರು. ಇದೀಗ ಟ್ರಂಪ್ ಅವರ ಹತ್ಯೆ ಯತ್ನದ ಬಳಿಕ ಅವರ ಬೆಂಬಲಿಗರು, ಪ್ರತಿಸ್ಪರ್ಧಿಗಳ ಹೇಳಿಕೆಗಳು ದ್ವೇಷದ ವಾತಾವರಣ ಸೃಷ್ಟಿಸಿವೆ ಎಂದು ಆರೋಪಿಸುತ್ತಿದ್ದಾರೆ ಎಂದು ಮಾಳವೀಯಾ ಹೇಳಿದ್ದಾರೆ.
ಟ್ರಂಪ್ ಅವರಿಂದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಅವರ ವಿರೋಧಿಗಳು ಟೀಕಿಸಿದ್ದಾರೆ. ಅದೇ ರೀತಿ ಭಾರತದ ವಿರೋಧ ಪಕ್ಷಗಳು ಮೋದಿ ಅವರಿಂದ ‘ಸಂವಿಧಾನ ಅಪಾಯದಲ್ಲಿದೆ’ ಎಂದು ಟೀಕೆಗಳನ್ನು ಮಾಡಿದ್ದಾರೆ. ಆದರೆ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದ್ದಾರೆ. ಈ ಮೂಲಕ, ಜಾಗತಿಕ ಎಡಪಕ್ಷಗಳ ದಾಳಿಯಿಂದ ಭಾರತೀಯ ಪ್ರಜಾಪ್ರಭುತ್ವ ಉಳಿದುಕೊಂಡಿದೆ ಎಂದು ಅವರು ವಿವರಿಸಿದ್ದಾರೆ.
ವಿಶ್ವದಾದ್ಯಂತ ಬಲಪಂಥೀಯ ನಾಯಕರು ದೈಹಿಕ ಮತ್ತು ಇತರ ರೀತಿಯಲ್ಲಿ ತೀವ್ರಗಾಮಿ ಎಡಪಂಥೀಯರಿಂದ ಸಕ್ರಿಯವಾಗಿ ಗುರಿಯಾಗುತ್ತಿದ್ದಾರೆ. ಆದರೆ ಈ ರೀತಿಯ ದಾಳಿಗಳಿಂದ ‘ದೇಶವೇ ಮೊದಲು’ ಸಿದ್ಧಾಂತವನ್ನು ಮಣಿಸಲು ಆಗುವುದಿಲ್ಲಹಿಮಂತ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.