ನವದೆಹಲಿ: ರಾಯಬರೇಲಿಯ ಸಂಸದನಾಗಿ ಪ್ರಮಾಣ ಸ್ವೀಕರಿಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮತ್ತೊಂದು ಸಂಸತ್ ಕ್ಷೇತ್ರವಾದ ವಯನಾಡ್‌ನ ಜನರನ್ನು ಉದ್ದೇಶಿಸಿ ಭಾವುಕ ಪತ್ರ ಬರೆದಿದ್ದಾರೆ. ಲೋಕಸಭೆಯಲ್ಲಿ ವಯನಾಡ್ ಅನ್ನು ಪ್ರತಿನಿಧಿಸಿದ್ದು ಸಂತಸ ಮತ್ತು ಗೌರವದ ವಿಚಾರವಾಗಿತ್ತು ಎಂದು ಬರೆದಿದ್ದಾರೆ.
‘ರಾಯಬರೇಲಿಯ ಸಂಸದನಾಗಿ ಮುಂದುವರಿಯುವ ಸಲುವಾಗಿ ವಯನಾಡ್‌ನ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಜೂನ್ 17ರಂದು ಪ್ರಕಟಿಸಿದೆ. ಆ ವೇಳೆ ನನ್ನ ಕಣ್ಣುಗಳಲ್ಲಿದ್ದ ನೋವನ್ನು ನೀವು ನೋಡಿರಬಹುದು’ ಎಂದಿದ್ದಾರೆ.
2019ರ ಲೋಕಸಭೆ ಚುನಾವಣೆಗೂ ಮುನ್ನ ವಯನಾಡ್‌ನ ಸೋದರ ಮತ್ತು ಸಹೋದರಿಯರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡ ಅವರು, ‘ನಾನು ನಿಮಗೆ ಅಪರಿಚಿತನಾಗಿದ್ದೆ. ಆದರೂ ನೀವು ನನ್ನನ್ನು ಬೆಂಬಲಿಸಿದಿರಿ. ನನ್ನನ್ನು ಭಾರಿ ಪ್ರೀತಿ ಮತ್ತು ಆದರತೆಯಿಂದ ಅಪ್ಪಿಕೊಂಡಿರಿ. ನಾನು ಯಾವಾಗೆಲ್ಲಾ ನಿಂದನೆಗೆ ಒಳಗಾಗಿದ್ದೇನೋ ಆಗೆಲ್ಲಾ ನಿಮ್ಮ ಪ್ರೀತಿ ನನ್ನನ್ನು ರಕ್ಷಿಸಿದೆ. ನೀವು ನನ್ನ ಕುಟುಂಬ, ಆಶ್ರಯ. ನನ್ನನ್ನು ಸಂದೇಹದಿಂದ ನೋಡುತ್ತಿದ್ದೀರಿ ಎಂದು ಎಂದಿಗೂ ಅನ್ನಿಸಲೇ ಇಲ್ಲ’ ಎಂದು ರಾಹುಲ್ ಬರೆದಿದ್ದಾರೆ.
ಕೇರಳ ಪ್ರವಾಹದ ಸಂದರ್ಭವನ್ನು ನೆನಪಿಸಿಕೊಂಡ ಅವರು, ‘ಪ್ರವಾಹದಲ್ಲಿ ಮನೆ, ಆಸ್ತಿ, ಸ್ನೇಹಿತರು ಎಲ್ಲವನ್ನೂ ಕಳೆದುಕೊಂಡಿರಿ. ಆದರೆ ನಿಮ್ಮಲ್ಲಿ ಒಂದು ಮಗು ಕೂಡ ಘನತೆಯನ್ನು ಬಿಟ್ಟುಕೊಡಲಿಲ್ಲ. ನನ್ನ ಭಾಷಣಗಳನ್ನು ವೇದಿಕೆ ಮೇಲೆ ಅನುವಾದಿಸುತ್ತಿದ್ದ ಯುವತಿಯರ ಧೈರ್ಯ, ಆತ್ಮವಿಶ್ವಾಸವನ್ನು ನಾನು ಹೇಗೆ ಮರೆಯಲಿ’ ಎಂದಿದ್ದಾರೆ.
‘ನನ್ನ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನಿಮ್ಮನ್ನು ಪ್ರತಿನಿಧಿಸಲಿದ್ದಾರೆ ಮತ್ತು ರಾಯಬರೇಲಿಯಲ್ಲೂ ನನ್ನನ್ನು ನಿಮ್ಮಷ್ಟೇ ಪ್ರೀತಿ ಮಾಡುವ ಕುಟುಂಬವಿದೆ ಎಂಬ ಕಾರಣಕ್ಕೆ ಸಮಾಧಾನದಿಂದ ಇದ್ದೇನೆ. ನಿಮಗೆ ಹೇಗೆ ಧನ್ಯವಾದ ಹೇಳುವುದು ಎಂದು ನನಗೆ ತಿಳಿಯುತ್ತಿಲ್ಲ. ನೀವು ನನ್ನ ಕುಟುಂಬ. ನಿಮ್ಮ ಸೇವೆಗಾಗಿ ನಾನು ಸದಾ ಸಿದ್ಧ’ ಎಂದಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಮತ್ತು ಉತ್ತರ ಪ್ರದೇಶದ ರಾಯಬರೇಲಿ ಎರಡೂ ಕ್ಷೇತ್ರಗಳಲ್ಲೂ ರಾಹುಲ್ ಸ್ಪರ್ಧಿಸಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.