ADVERTISEMENT

ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಮತ್ತೆ ಲಾಕ್ ಮಾಡಬೇಕು: ಜೆ.ಪಿ.ನಡ್ಡಾ

ಪಿಟಿಐ
Published 17 ಆಗಸ್ಟ್ 2021, 11:39 IST
Last Updated 17 ಆಗಸ್ಟ್ 2021, 11:39 IST
ಜೆ.ಪಿ.ನಡ್ಡಾ (ಪಿಟಿಐ ಚಿತ್ರ)
ಜೆ.ಪಿ.ನಡ್ಡಾ (ಪಿಟಿಐ ಚಿತ್ರ)   

ನವದೆಹಲಿ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಮತ್ತೆ ಲಾಕ್ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗ್ರಹಿಸಿದ್ದಾರೆ.

ಅತ್ಯಾಚಾರದಂಥ ಪ್ರಕರಣಗಳನ್ನು ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳಬಾರದು ಎಂದೂ ಅವರು ಹೇಳಿದ್ದಾರೆ. ಸಂತ್ರಸ್ತೆಯ ಕುಟುಂಬದವರ ಜತೆಗಿನ ಫೋಟೊ ಟ್ವೀಟ್ ಮಾಡಿದ್ದನ್ನು ಸಮರ್ಥಿಸಿಕೊಂಡ ವಿಚಾರವಾಗಿ ಅವರು ರಾಹುಲ್ ಗಾಂಧಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇರಳದ ಕೋಯಿಕ್ಕೋಡ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಪಕ್ಷದ ಜಿಲ್ಲಾ ಸಮಿತಿ ಕಚೇರಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ನಡ್ಡಾ ಮಾತನಾಡಿದ್ದಾರೆ.

ಫೋಟೊವನ್ನು ಪೋಸ್ಟ್ ಮಾಡುವ ಮುನ್ನ ಸಂತ್ರಸ್ತೆಯ ಕುಟುಂಬದವರ ಅನುಮತಿ ಪಡೆಯಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಇದನ್ನು ಸಂತ್ರಸ್ತೆಯ ಕುಟುಂಬದವರು ನಿರಾಕರಿಸಿದ್ದಾರೆ. ಹೀಗಾಗಿ ರಾಹುಲ್ ಅವರ ಖಾತೆಯನ್ನು ಮತ್ತೆ ಲಾಕ್ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

‘ಸದಾ ಸುಳ್ಳು ಹೇಳುವ ಅಭ್ಯಾಸದಿಂದಾಗಿ ರಾಹುಲ್ ಗಾಂಧಿ ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ. ಸಾರ್ವಜನಿಕರು ಈಗಾಗಲೇ ಅವರ ರಾಜಕೀಯ ಖಾತೆಯನ್ನು ಲಾಕ್ ಮಾಡಿದ್ದಾರೆ. ಈಗ ಟ್ವಿಟರ್ ಕೂಡ ಅವರ ಖಾತೆಯನ್ನು ಲಾಕ್ ಮಾಡಬೇಕು’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

ಕಳೆದ ವಾರ ದೆಹಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದೊಂದಿಗಿನ ಫೋಟೊವನ್ನು ರಾಹುಲ್‌ ಗಾಂಧಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟರ್‌ ಲಾಕ್‌ ಮಾಡಿತ್ತು. ಇದಕ್ಕೆ ವಿರೋಧ ಪಕ್ಷದ ಸದಸ್ಯರಿಂದ ಭಾರಿ ಆಕ್ಷೇಪವೂ ವ್ಯಕ್ತವಾಗಿತ್ತು. ಕೆಲವು ದಿನಗಳ ಬಳಿಕ ಖಾತೆಯನ್ನು ಟ್ವಿಟರ್ ಅನ್‌ಲಾಕ್ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.