ನವದೆಹಲಿ: ‘ಗಿಗ್ ಕಾರ್ಮಿಕರ ಹಿತ ಕಾಯುವ ದೃಷ್ಟಿಯಿಂದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದ್ದು, ಇದರಿಂದ 3 ಲಕ್ಷ ಗಿಗ್ ಕೆಲಸಗಾರರು ತಮ್ಮ ಹಕ್ಕುಗಳೊಂದಿಗೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಲಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಇಡೀ ದೇಶದಲ್ಲೇ ಇಂಥ ಕಾನೂನು ಜಾರಿಗೆ ಬಂದಿದ್ದು ಇದೇ ಮೊದಲು. ಗಿಗ್ ಆರ್ಥಿಕತೆಯಲ್ಲಿ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಈ ನೂತನ ಕಾನೂನು ನೀಡಲಿದೆ. ಇದರಿಂದ ಬಹಳಷ್ಟು ಯುವಸಮುದಾಯಕ್ಕೆ ಖಾತ್ರಿ ನೀಡಬಲ್ಲ ಉದ್ಯೋಗಕ್ಕೆ ಆಧಾರವಾಗಲಿದೆ’ ಎಂದಿದ್ದಾರೆ.
‘ಕರ್ನಾಟಕದಲ್ಲೂ ಈ ಕುರಿತು ಚರ್ಚಿಸಲಾಗಿತ್ತು. ಇತ್ತೀಚಿನ ಬಜೆಟ್‌ನಲ್ಲಿ ಗಿಗ್ ಕಾರ್ಮಿಕರಿಗಾಗಿ ₹4 ಲಕ್ಷವರೆಗೆ ಅಪಘಾತ ವಿಮೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ನಮ್ಮ ಪಕ್ಷವಿರುವ ಸರ್ಕಾರಗಳು ಜಾರಿಗೆ ತರುತ್ತಿರುವ ಇಂಥ ಕಾನೂನುಗಳ ಮೂಲಕ ಕಾರ್ಮಿಕರು ಹಾಗೂ ಮಾಲೀಕರು ಇಬ್ಬರಿಗೂ ಪ್ರಯೋಜನವಾಗಲಿದೆ’ ಎಂದಿದ್ದಾರೆ.
‘ಬಡವರ ಪರವಾಗಿ ನಾವು ಸದಾ ನಿಲ್ಲುತ್ತೇವೆ ಹಾಗೂ ಭಾರತದ ಜನರಿಗಾಗಿ ಸದಾ ಶ್ರಮಿಸುತ್ತೇವೆ. ಆ ಮೂಲಕ ತಮ್ಮ ಪಾಲಿನದನ್ನು ಅವರು ಪಡೆಯುವಂತಾಗಲಿದೆ. ನಾವು ನೀಡಿದ ಭರವಸೆಯಂತೆಯೇ ಅದನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ’ ಎಂದಿದ್ದಾರೆ.
‘ಭಾರತದ ಪ್ರತಿಯೊಬ್ಬ ಶ್ರಮಿಕ ಆರ್ಥಿಕವಾಗಿ ಸದೃಢನಾದರೆ ಹಾಗೂ ಸಂಪೂರ್ಣ ಹಕ್ಕನ್ನು ಪಡೆಯುವವನಾದರೆ ಮಾತ್ರ ಭಾರತ ಒಂದಾಗಲಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.