ADVERTISEMENT

ಕೆಳಮನೆಯಲ್ಲಿ ಅಣ್ಣ–ತಂಗಿ, ಮೇಲ್ಮನೆಯಲ್ಲಿ ತಾಯಿ

ಪಿಟಿಐ
Published 23 ನವೆಂಬರ್ 2024, 22:09 IST
Last Updated 23 ನವೆಂಬರ್ 2024, 22:09 IST
<div class="paragraphs"><p>ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ</p></div>

ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ

   

ಪಿಟಿಐ ಚಿತ್ರ

ನವದೆಹಲಿ: ಕೇರಳದ ವಯನಾಡ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 4.1 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದು, ಲೋಕಸಭೆಗೆ ಇದೇ ಮೊದಲ ಬಾರಿಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.

ADVERTISEMENT

ಇವರ ಆಯ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ದನಿಗೆ ಇನ್ನಷ್ಟು ಬಲ ನೀಡಲಿದೆ ಎನ್ನಲಾಗಿದೆ. ತಾಯಿ ಸೋನಿಯಾಗಾಂಧಿ, ಅಣ್ಣ ರಾಹುಲ್‌ ಸ್ಪರ್ಧಿಸಿದ್ದಾಗ, ಹಿನ್ನೆಲೆಯಲ್ಲಿ ನಿಂತು ಗೆಲುವಿಗೆ ಶ್ರಮಿಸಿದ್ದ ಪ್ರಿಯಾಂಕಾ, ಈಗ ಮುನ್ನೆಲೆಗೆ ಬಂದಿದ್ದಾರೆ.

ಗೆಲುವಿನೊಂದಿಗೆ ಅಣ್ಣ–ತಂಗಿ ಒಟ್ಟಿಗೇ ಲೋಕಸಭೆಯಲ್ಲಿ ಅಸೀನರಾಗಲಿದ್ದಾರೆ. ತಾಯಿ ಸೋನಿಯಾ ಸದ್ಯ ಪ್ರಸ್ತುತ ರಾಜ್ಯಸಭೆ ಸದಸ್ಯೆ. ಏಕ ಕಾಲದಲ್ಲಿ ಒಂದೇ ಕುಟುಂಬದ ಮೂವರು ಸಂಸತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಬರೇಲಿ, ವಯನಾಡ್‌ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ರಾಹುಲ್‌ಗಾಂಧಿ ಬಳಿಕ ವಯನಾಡ್‌ ಕ್ಷೇತ್ರದ ಸದಸ್ಯತ್ವಕ್ಕೆ
ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಕ್ಷೇತ್ರದಿಂದ ಪ್ರಿಯಾಂಕಾ ಗೆದ್ದಿದ್ದಾರೆ. 

ಪ್ರಿಯಾಂಕಾ ಅವರು 4,10,931 ಮತಗಳಿಂದ ಗೆಲುವು ಸಾಧಿಸಿದರು. ಪ್ರಿಯಾಂಕಾ 6,22,338 ಮತ ಪಡೆದರೆ, ಸಮೀಪದ ಅಭ್ಯರ್ಥಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ  2,11,407, ಎನ್‌ಡಿಎಯ ನವ್ಯಾ ಹರಿದಾಸ್‌ 1,09,939 ಮತ ಪಡೆದರು. 

ಸಾರ್ವತ್ರಿಕ ಚುನಾವಣೆಯಲ್ಲಿ ರಾಹುಲ್‌ಗಾಂಧಿ ಒಟ್ಟು 6,47,445 ಮತ ಪಡೆದಿದ್ದು, 3,64,422 ಮತಗಳಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ಗೆಲುವಿನ ಅಂತರವನ್ನು ಇನ್ನಷ್ಟು ಹಿಗ್ಗಿಸಿದ್ದಾರೆ.

‘ವಯನಾಡ್‌ ಕ್ಷೇತ್ರದ ಸೋದರ, ಸೋದರಿಯರೇ ನಿಮ್ಮ ಬೆಂಬಲ, ವಿಶ್ವಾಸದಿಂದ ಮನಸ್ಸು ತುಂಬಿ ಬಂದಿದೆ. ನಿಮ್ಮ ಕನಸು ಈಡೇರಿಸಲು, ಹಕ್ಕುಗಳ ಸಾಕಾರಕ್ಕಾಗಿ ಹೋರಾಡಲಿದ್ದೇನೆ’ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.