ADVERTISEMENT

ಛತ್ತೀಸಗಢ | ಅಧಿಕಾರಕ್ಕೆ ಬಂದರೆ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ: ರಾಹುಲ್

ಪಿಟಿಐ
Published 28 ಅಕ್ಟೋಬರ್ 2023, 11:12 IST
Last Updated 28 ಅಕ್ಟೋಬರ್ 2023, 11:12 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ರಾಯಪುರ: ‘ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಹಾಗೂ ಬೀಡಿ ಎಲೆ ಸಂಗ್ರಹಕಾರರಿಗೆ ವಾರ್ಷಿಕ ₹4 ಸಾವಿರ ಸಹಾಯಧನ ನೀಡಲಾಗುವುದು’ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು.

ADVERTISEMENT

ಕಂಕೇರ್ ಜಿಲ್ಲೆಯ ಭಾನುಪ್ರತಾಪಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಕುರಿತು ನರೇಂದ್ರ ಮೋದಿ ಅವರಿಗೆ ಕಾಳಜಿ ಇದ್ದಿದ್ದೇ ಆದರೆ, ಜಾತಿ ಜನಗಣತಿಗೆ ಇಷ್ಟೇಕೆ ಭಯಪಡುತ್ತಿದ್ದಾರೆ’ ಎಂದು ಸವಾಲೆಸೆದರು.

’ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶ ವ್ಯಾಪಿ ಜಾತಿ ಜನಗಣತಿ ನಡೆಸಲಾಗುವುದು. ಛತ್ತೀಸಗಢದಲ್ಲಿ ಇದನ್ನು ಈಗಲೇ ನಡೆಸುತ್ತೇವೆ’ ಎಂದು ವಾಗ್ದಾನ ಮಾಡಿದರು.

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮೂರು ಕೈಗಾರಿಕೋದ್ಯಮಿಗಳಿಗೆ ಸಹಾಯವಾಗುತ್ತಿದೆಯೇ ಹೊರತು ಸಾಮಾನ್ಯ ಜನರಿಗಲ್ಲ. ಆದರೆ ಕಾಂಗ್ರೆಸ್‌ ಪಕ್ಷವು ರೈತರು, ದಲಿತರು, ಕಾರ್ಮಿಕರು ಮತ್ತು ಆದಿವಾಸಿಗಳ ಹಿತವನ್ನೇ ಸದಾ ಬಯಸುತ್ತದೆ. ಛತ್ತೀಸಗಢದ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ ನಂತರ ಈಡೇರಿಸಲಾಗಿದೆ. ಆದರೆ ಬಿಜೆಪಿ ನಾಯಕರು ಆದಿವಾಸಿಗಳನ್ನು ವನವಾಸಿಗಳು ಎಂದು ಕರೆಯುವ ಮೂಲಕ ಇಡೀ ಸಮುದಾಯವನ್ನೇ ಅವಮಾನ ಮಾಡಿದ್ದಾರೆ. ಅವರ ಸಂಸ್ಕೃತಿ, ಇತಿಹಾಸ ಮತ್ತು ಭಾಷೆಯ ಮೇಲೆ ದಾಳಿ ನಡೆಸಿದ್ದಾರೆ’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ತಮ್ಮ ಭಾಷಣದ ಸಮಯದಲ್ಲಿ ಅಸ್ವಸ್ಥಗೊಂಡ ವ್ಯಕ್ತಿಗೆ ರಾಹುಲ್ ಗಾಂಧಿ ತಮ್ಮ ಭಾಷಣ ನಿಲ್ಲಿಸಿ, ನೀರು ನೀಡಿದರು. ಮರಳಿ ವೇದಿಕೆಗೆ ಬಂದು ಮಾತು ಮುಂದುವರಿಸಿದರು. ಕೊನೆಯಲ್ಲಿ ಅಸ್ವಸ್ಥಗೊಂಡ ವ್ಯಕ್ತಿಯ ಆರೋಗ್ಯ ವಿಚಾರಿಸಿದರು.

ಭಾನುಪ್ರತಾಪಪುರ ಸೇರಿದಂತೆ 20 ಕ್ಷೇತ್ರಗಳಿಗೆ ನ. 7ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಉಳಿದ ಕ್ಷೇತ್ರಗಳಿಗೆ ನ. 17ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಬುಡಕಟ್ಟು ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾನುಪ್ರತಾಪಪುರ ಕ್ಷೇತ್ರದಲ್ಲಿ ರಾಜೀವಗಾಂಧಿ ಪ್ರೋತ್ಸಾಹನ್ ಯೋಜನಾ ಮೂಲಕ ಬೀಡಿ ಎಲೆ ಸಂಗ್ರಹಿಸುವವರಿಗೆ ಕಾಂಗ್ರೆಸ್ ನೆರವು ನೀಡುವುದಾಗಿ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.