ADVERTISEMENT

ಪೊಲೀಸ್‌ ಠಾಣೆಯಲ್ಲಿ 50 ನಿಮಿಷ ಕುಳಿತ ರಾಹುಲ್‌

ಪಿಟಿಐ
Published 26 ಅಕ್ಟೋಬರ್ 2018, 16:25 IST
Last Updated 26 ಅಕ್ಟೋಬರ್ 2018, 16:25 IST
ಲೋಧಿ ಕಾಲೊನಿ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ  (ಕೃಪೆ: ಟ್ವಿಟರ್)
ಲೋಧಿ ಕಾಲೊನಿ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ (ಕೃಪೆ: ಟ್ವಿಟರ್)   

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯಲ್ಲಿ ಕಳಿಸಿ ನಾಗೇಶ್ವರ ರಾವ್ ಅವರನ್ನು ಹಂಗಾಮಿ ನಿರ್ದೇಶಕರಾಗಿ ನೇಮಕ ಮಾಡಿದ ಮೋದಿ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಹುಲ್ಗಾಂಧಿ ನೇತೃತ್ವದಲ್ಲಿ ಸಿಬಿಐ ಮುಖ್ಯ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು.

ಸಿಬಿಐ ನಿರ್ದೇಶಕರಾಗಿ ನಾಗೇಶ್ವರ ರಾವ್ ಅವರನ್ನು ಇಷ್ಟೊಂದು ತರಾತುರಿಯಲ್ಲಿ ನೇಮಕ ಮಾಡಿರುವುದು ಯಾಕೆ? ಎಲ್ಲ ಪಕ್ಷಗಳು ಈ ಬಗ್ಗೆ ಪ್ರತಿಭಟಿಸಬೇಕು ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ADVERTISEMENT

ಪ್ರತಿಭಟನೆಯಿಂದಾಗಿ ಲೋಧಿ ರಸ್ತೆ, ಸಿಜಿಒ ಕಾಂಪ್ಲೆಕ್ಸ್, ಭೀಷ್ಮ್ ಪಿತಾಮಹ್ ರಸ್ತೆ, ಸಾಯಿಬಾಬಾ ಚೌಕ್, ದಯಾಳ್ ಸಿಂಗ್ ಕಾಲೇಜು ಬಳಿ ಸಂಚಾರ ದಟ್ಟನೆ ಜಾಸ್ತಿಯಾಗಿತ್ತು.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ಮೋದಿ ಸರ್ಕಾರ ಸಿಬಿಐ, ಚುನಾವಣಾ ಆಯೋಗ ಮತ್ತು ಜಾರಿ ನಿರ್ದೇಶನಾಲಯವನ್ನು ಹಾಳುಗೆಡಹುತ್ತಿದೆ ಎಂದಿದ್ದಾರೆ.

ವಿಪಕ್ಷಗಳು ದೇಶದಾದ್ಯಂತವಿರುವ ಸಿಬಿಐ ಕಚೇರಿಗಳಿಗೆ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಂಡಿದ್ದವು.ಕೆಲವೆಡೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಬಳಸಿದ್ದಾರೆ.

ಲೋಕತಾಂತ್ರಿಕ್ ಜನತಾ ದಳ ನಾಯಕ ಶರದ್ ಯಾದವ್, ಸಿಪಿಐ ನೇತಾರ ಡಿ, ರಾಜಾ ಮತ್ತು ಟಿಎಂಸಿ ನಾಯಕ ಹಖ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆ ನಡೆಸಿದ ರಾಹುಲ್ ಗಾಂಧಿ ಮತ್ತು ಇತರ ನೇತಾರರನ್ನು ಬಂಧಿಸಿದ್ದು, ಕೆಲವು ಹೊತ್ತಿನ ನಂತರ ಬಿಡುಗಡೆ ಮಾಡಲಾಗಿದೆ.

ಪ್ರಧಾನಿ ಈ ವಿಷಯಕ್ಕೆ ಪ್ರತಿಕ್ರಯಿಸಲು ನುಣುಚಿಕೊಳ್ಳಬಹುದು ಆದರೆ ಕೊನೆಗೆ ಸತ್ಯ ಗೆಲ್ಲುತ್ತದೆ. ಸಿಬಿಐ ನಿರ್ದೇಶಕರನ್ನು ಕಿತ್ತೊಗೆಯುವುದು ಅವರಿಗೇನೂ ಸಹಾಯವಾಗಲ್ಲ. ಭಯದಿಂದಾಗಿ ಮೋದಿ ಸಿಬಿಐ ನಿರ್ದೇಶಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಲೋಧಿ ಕಾಲೊನಿ ಪೊಲೀಸ್ ಠಾಣೆಯಿಂದ ಬಿಡುಗಡೆಗೊಂಡ ರಾಹುಲ್ ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

50 ನಿಮಿಷ ಠಾಣೆಯಲ್ಲಿ ಕುಳಿತ ರಾಹುಲ್

ರಾಹುಲ್ ಗಾಂಧಿ ಮತ್ತು ಪ್ರತಿಭಟನಾನಿರತ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಲೋಧಿ ಕಾಲನಿ ಪೊಲೀಸ್‌ ಠಾಣೆಗೆ ಕರೆದೊಯ್ದರು. ಅಂದಾಜು 50 ನಿಮಿಷ ಠಾಣೆಯಲ್ಲಿದ್ದ ರಾಹುಲ್‌ ಹಾಗೂ ಇತರ ನಾಯಕರನ್ನು ನಂತರ ಬಿಡುಗಡೆ ಮಾಡಲಾಯಿತು.

ಕಾಂಗ್ರೆಸ್‌ ನಾಯಕರಾದ ಅಶೋಕ್‌ ಗೆಹ್ಲೋಟ್‌, ಭೂಪಿಂದರ್‌ ಹೂಡಾ, ಅಹ್ಮದ್‌ ಪಟೇಲ್‌, ಮೋತಿಲಾಲ್‌ ವೊರಾ, ವೀರಪ್ಪ ಮೊಯಿಲಿ, ಆನಂದ್‌ ಶರ್ಮಾ, ಲೋಕತಾಂತ್ರಿಕ ಜನತಾದಳ ನಾಯಕ ಶರದ್‌ ಯಾದವ್‌, ಸಿಪಿಐ ನಾಯಕ ಡಿ. ರಾಜಾ, ಟಿಎಂಸಿಯ ನದೀಮುಲ್‌ ಹಕ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಸೇರಿ ವಿವಿಧ ರಾಜ್ಯಗಳ ಸಿಬಿಐ ಕಚೇರಿ ಎದುರು ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಿತ್ರ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.