ADVERTISEMENT

ಮಹಿಳೆಯರಿಗೆ ಆದ್ಯತೆ; 10 ವರ್ಷಗಳಲ್ಲಿ ಶೇ 50 ಮಹಿಳಾ ಮುಖ್ಯಮಂತ್ರಿ: ರಾಹುಲ್

ಪಿಟಿಐ
Published 1 ಡಿಸೆಂಬರ್ 2023, 14:00 IST
Last Updated 1 ಡಿಸೆಂಬರ್ 2023, 14:00 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ಕೊಚ್ಚಿ: ಕಾಂಗ್ರೆಸ್‌ ಪಕ್ಷವು ಮಹಿಳಾ ನಾಯಕತ್ವಕ್ಕೆ ಹೆಚ್ಚು ಒತ್ತುಕೊಟ್ಟಿದ್ದು, ಮುಂದಿನ 10 ವರ್ಷಗಳಲ್ಲಿ ಶೇ 50 ರಷ್ಟು ಮಹಿಳಾ ಮುಖ್ಯಮಂತ್ರಿಗಳು ಇರಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

ADVERTISEMENT

ಕೇರಳ ಮಹಿಳಾ ಕಾಂಗ್ರೆಸ್‌ನ ಸಮಾವೇಶವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿ ನಿಭಾಯಿಸಬಲ್ಲ ಹಲವು ಸಮರ್ಥ ಮಹಿಳಾ ಮುಖಂಡರು ಪಕ್ಷದಲ್ಲಿದ್ದಾರೆ’ ಎಂದರು.

‘ಕಾಂಗ್ರೆಸ್‌ ಆಡಳಿತದಲ್ಲಿರುವ ಯಾವ ರಾಜ್ಯದಲ್ಲೂ ಈಗ ಮಹಿಳಾ ಸಿಎಂ ಇಲ್ಲ. ಆದರೆ ಉತ್ತಮ ಮುಖ್ಯಮಂತ್ರಿ ಆಗಲು ಸಮರ್ಥರಾದ ಮಹಿಳೆಯರು ಪಕ್ಷದಲ್ಲಿದ್ದಾರೆ. ಮುಂದಿನ ಒಂದು ದಶಕದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿರುವ ಕಡೆ ಶೇ 50 ರಷ್ಟು ಮಹಿಳಾ ಮುಖ್ಯಮಂತ್ರಿಗಳು ಇರಬೇಕು ಎಂಬ ಗುರಿ ನಮ್ಮದು’ ಎಂದು ನುಡಿದರು.

ಆರ್‌ಎಸ್‌ಎಸ್‌ನಿಂದ ಮಹಿಳೆಯರ ಕಡೆಗಣನೆ:

ಆರ್‌ಎಸ್‌ಎಸ್‌ನ ಸಿದ್ಧಾಂತದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಎಂದು ದೂರಿದ ಅವರು, ‘ಅದು (ಆರ್‌ಎಸ್‌ಎಸ್‌) ಸಂಪೂರ್ಣ ಪುರುಷರ ಸಂಸ್ಥೆ’ ಎಂದು ಟೀಕಿಸಿದರು. 

‘ಆರ್‌ಎಸ್‌ಎಸ್‌ ತನ್ನ ಇತಿಹಾಸದಲ್ಲಿ ಮಹಿಳೆಯರಿಗೆ ಯಾವುದೇ ಅಧಿಕಾರ ನೀಡಿಲ್ಲ. ಆರ್‌ಎಸ್‌ಎಸ್ ಮತ್ತು ಕಾಂಗ್ರೆಸ್ ನಡುವಣ ಮೂಲಭೂತ ಹೋರಾಟವು ಭಾರತದ ರಾಜಕೀಯದಲ್ಲಿ ಮಹಿಳೆಯರು ವಹಿಸಬೇಕಾದ ಪಾತ್ರದ ಕುರಿತದ್ದಾಗಿದೆ’ ಎಂದು ಹೇಳಿದರು.

‘ಅನೇಕ ವಿಚಾರಗಳಲ್ಲಿ ಮಹಿಳೆಯರು ಪುರುಷರಿಗಿಂತ ಶ್ರೇಷ್ಠರು ಎಂದು ನಾನು ಭಾವಿಸುತ್ತೇನೆ. ಪುರುಷರಿಗಿಂತ ಹೆಚ್ಚು ತಾಳ್ಮೆಯನ್ನು ಅವರು ಹೊಂದಿದ್ದಾರೆ. ಪುರುಷರಿಗಿಂತ ಹೆಚ್ಚು ದೂರದೃಷ್ಟಿ ಹೊಂದಿರುವ ಅವರು ಸೂಕ್ಷ್ಮತೆ ಮತ್ತು ಸಹಾನುಭೂತಿ ವಿಚಾರದಲ್ಲೂ ಮುಂದಿದ್ದಾರೆ. ಆದ್ದರಿಂದ ಮಹಿಳೆಯರು ಅಧಿಕಾರದ ಭಾಗವಾಗಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಬಲವಾದ ನಂಬಿಕೆ‘ ಎಂದು ತಿಳಿಸಿದರು.

ಜನರ ಮಾತು ಆಲಿಸುವೆ (ಕಣ್ಣೂರು ವರದಿ): ಬಿಜೆಪಿ ನಾಯಕರ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಅವರು, ‘ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಎಲ್ಲ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳು ತಮ್ಮತ್ತ ತಿರುಗಬೇಕು ಎಂಬ ಬಯಸುವರು. ಆದರೆ ನಾನು ಮೈಕ್ರೋಫೋನ್‌ಅನ್ನು ಜನರತ್ತ ತಿರುಗಿಸುತ್ತೇನೆ. ಅವರ ಮಾತು ಆಲಿಸುವುದನ್ನು ಹೆಚ್ಚು ಇಷ್ಟಪಡುವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.