ಹಾಥರಸ್: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಸತ್ಸಂಗವೊಂದರ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾದರು.
ದೆಹಲಿಯಿಂದ ಶುಕ್ರವಾರ ಬೆಳಿಗ್ಗೆಯೇ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ, ಪಕ್ಷದ ವಕ್ತಾರರಾದ ಸುಪ್ರಿಯಾ ಶ್ರೀನೆತ್ ಮತ್ತು ಪದಾಧಿಕಾರಿಗಳ ಜೊತೆ ಅವರು ಹಾಥರಸ್ ತಲುಪಿದ್ದಾರೆ.
ಮೊದಲಿಗೆ ಬೆಳಿಗ್ಗೆ 7.15ರ ಸುಮಾರಿಗೆ ಅಲಿಗಢದ ಪಿಲಖಾನ ಹಳ್ಳಿಗೆ ತೆರಳಿದ ಅವರು, ಸಂತ್ರಸ್ತರ ಕುಟುಂಬ ವರ್ಗದವರ ಜೊತೆ ಮಾತುಕತೆ ನಡೆಸಿದರು. ಬಳಿಕ, ಹಾಥರಸ್‌ಗೆ ತೆರಳಿ ಅಲ್ಲಿಯೂ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಬಂಧಿಕರ ನೋವು ಆಲಿಸಿದರು.
ಇತ್ತೀಚೆಗೆ, ಸ್ವಯಂ ಘೋಷಿತ ದೇವಮಾನವ ಬಾಬಾ ಭೋಲೆ ಅವರ ಸತ್ಸಂಗದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 121 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಬಹುತೇಕರು ಮಹಿಳೆಯರು.
ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಇದೊಂದು ದುಃಖಕರ ಘಟನೆ. ಹಲವು ಮಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ನಾನು ರಾಜಕೀಯ ಹೇಳಿಕೆ ನೀಡಲು ಹೋಗುವುದಿಲ್ಲ. ಆದರೆ, ಇಲ್ಲಿನ ಆಡಳಿತ ವರ್ಗದಿಂದ ಲೋಪವಾಗಿದೆ. ಮೃತರ ಕುಟುಂಬ ವರ್ಗದವರು ಕಡುಬಡವರಾಗಿರುವುದರಿಂದ ಗರಿಷ್ಠ ಪರಿಹಾರ ನೀಡುವುದು ಮುಖ್ಯ. ಹೃದಯ ತೆರೆದು ಈ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ. ಪರಿಹಾರ ನೀಡುವುದರಲ್ಲಿ ವಿಳಂಬವಾದರೆ ಅದು ಯಾರಿಗೂ ಅನುಕೂಲವಾಗುವುದಿಲ್ಲ. ಮೃತರ ಕುಟುಂಬ ವರ್ಗದವರ ಜೊತೆ ನಾನು ಮಾತನಾಡಿದೆ. ಸತ್ಸಂಗದ ವೇಳೆ ಪೊಲೀಸ್ ವ್ಯವಸ್ಥೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಆಘಾತದಲ್ಲಿದ್ದಾರೆ. ಅವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಬಯಸಿದ್ದೇನೆ ಎಂದು ಹೇಳಿದ್ದಾರೆ.
ರಾಹುಲ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಮೃತರ ಕುಟುಂಬದ ಸದಸ್ಯೆ ಮೋನು,‘ಅವರು ನಮಗೆ ಸಹಾಯ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು. ಅವರ ಪಕ್ಷವು ಅಧಿಕಾರದಲ್ಲಿಲ್ಲದ ಕಾರಣ ಸರ್ಕಾರದೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು’ಎಂದಿದ್ದಾರೆ.
ತಾಯಿಯನ್ನು ಕಳೆದುಕೊಂಡಿರುವ ಖುಷ್ಬೂ ಎಂಬ ಬಾಲಕಿಗೆ ರಾಹುಲ್ ನೆರವಿನ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.