ವಯನಾಡ್: ‘ಎಷ್ಟು ಬಾರಿ ಮೋದಿ ಅವರ ಬಗ್ಗೆಯೇ ಮಾತನಾಡುವುದು. ಪ್ರಿಯಾಂಕಾ ಈಗಾಗಲೇ ಮೋದಿ ಬಗ್ಗೆ ಪ್ರಸ್ತಾಪಿಸಿದ್ದಾಳೆ. ಮೋದಿ ಅವರ ಬಗ್ಗೆ ಮಾತನಾಡಿ ಮಾತನಾಡಿ ಬೇಸರ ಬಂದುಬಿಟ್ಟದೆ. ಮತ್ತೆ ಯಾಕೆ ಎರಡು ಬಾರಿ ಅವರ ಹೆಸರು ಪ್ರಸ್ತಾಪಿಸುವುದು’...
ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ವೇಳೆ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪರ ಪ್ರಚಾರ ನಡೆಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದ ಮಾತಿದು. ರಾಹುಲ್ ಅವರು ಪ್ರಿಯಾಂಕಾ ಪರ ಮಾನಂದವಾಡಿ ಹಾಗೂ ಅರೀಕೋಡ್‌ನಲ್ಲಿ ಭಾನುವಾರ ಪ್ರಚಾರ ಸಭೆಗಳನ್ನು ನಡೆಸಿದರು.
ಈ ಪ್ರಚಾರ ಸಭೆಗಳಲ್ಲಿನ ತಮ್ಮ ಭಾಷಣದಲ್ಲಿ ರಾಹುಲ್ ಅವರು ಪ್ರಧಾನಿ ಮೋದಿ ಅವರನ್ನು ಟೀಕಿಸಲಿಲ್ಲ. ಆದರೆ, ಪ್ರಿಯಾಂಕಾ ಹಾಗೂ ತಮ್ಮ ಮಧ್ಯೆದ ಸಂಬಂಧ, ಇಬ್ಬರ ಬಾಲ್ಯದ ನೆನಪುಗಳನ್ನು ಸಹೋದರ ರಾಹುಲ್ ತಮ್ಮ ಭಾಷಣಗಳಲ್ಲಿ ಮೆಲುಕು ಹಾಕಿದರು.
‘ನನ್ನ ಮುಂದೆ ಎರಡು ಆಯ್ಕೆಗಳಿವೆ. ಒಂದೋ ನಾನು ರಾಜಕೀಯ ಭಾಷಣ ಮಾಡುವುದು. ಇಲ್ಲವೇ ನಾನು ನನ್ನ ಕುಟುಂಬದ ಬಗ್ಗೆ ಮಾತನಾಡುವುದು. ನಾನು ನನ್ನ ಕುಟುಂಬದ ಬಗ್ಗೆ ಮಾತನಾಡುವುದಕ್ಕೇ ಇಷ್ಟ ಪಡುತ್ತೇನೆ. ಅದರಲ್ಲಿಯೂ ನಿಮ್ಮ ಅಭ್ಯರ್ಥಿಯ ಬಗ್ಗೆಯೇ ಹೆಚ್ಚು ಮಾತನಾಡಲು ಬಯಸುತ್ತೇನೆ’ ಎಂದರು.
‘ನನ್ನ ಸಹೋದರಿ ಯಾವಾಗಲೂ ನನಗಾಗಿ, ನಮ್ಮ ತಾಯಿಗಾಗಿ ಪ್ರಚಾರ ನಡೆಸಿದ್ದಾಳೆ. ಆದರೆ, ಚುನಾವಣೆಗಳಲ್ಲಿ ಎಂದಿಗೂ ಸ್ಪರ್ಧಿಸಿರಲಿಲ್ಲ. ಇದೇ ಆಕೆಯ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಪ್ರಿಯಾಂಕಾ ನನ್ನಗಿಂತ ಹೆಚ್ಚಿನ ಕೆಲಸಗಳನ್ನು ಮಾಡಬಲ್ಲಳು’ ಎಂದರು.
ಸಂವಿಧಾನವನ್ನು ರಕ್ಷಿಸಬೇಕು ಎನ್ನುವ ಕುರಿತು ಮಾತನಾಡಿದ ರಾಹುಲ್, ‘ಸಂವಿಧಾನವನ್ನು ಸಿಟ್ಟಿನಿಂದ ಅಥವಾ ದ್ವೇಷದಿಂದ ಬರೆದಿದ್ದಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದವರು ಸಂವಿಧಾನವನ್ನು ಬರೆದಿದ್ದು. ಯಾರು ಶೋಷಣೆಗೆ ಒಳಗಾಗಿದ್ದರೋ ಅವರು ಬರೆದಿದ್ದು. ವರ್ಷಗಟ್ಟಲೇ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದವರು ಬರೆದಿದ್ದು. ಇವರೆಲ್ಲರೂ ಸಂವಿಧಾನವನ್ನು ಮಾನವೀಯತೆ, ಪ್ರೀತಿ ಹಾಗೂ ವಾತ್ಸಲ್ಯದಿಂದ ಬರೆದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
ಪ್ರಿಯಾಂಕಾ ಬಗೆಗಿನ ರಾಹುಲ್ ನೆನಪು...
‘ನಮ್ಮ ತಂದೆ (ರಾಜೀವ್ ಗಾಂಧಿ) ಇಬ್ಬರಿಗೂ ಕ್ಯಾಮೆರಾವನ್ನು ಉಡುಗೊರೆಯಾಗಿ ನೀಡಿದ್ದರು. ಯಾರು ಉತ್ತಮ ಫೋಟೊ ತೆಗೆಯುತ್ತಾರೆ ಎಂದು ನಮ್ಮಿಬ್ಬರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಸ್ಪರ್ಧೆಯಲ್ಲಿ ಯಾರು ಗೆದ್ದರು ಎಂದು ನನಗೆ ನೆನಪಿಲ್ಲ’ ಎಂದು ರಾಹುಲ್ ಹೇಳುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಪ್ರಿಯಾಂಕಾ ‘ನೀನೆ ಗೆದ್ದಿದ್ದು’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ‘ಹೌದಾ. ಪ್ರಿಯಾಂಕಾ ಹೇಳುತ್ತಿದ್ದಾಳೆ ನಾನೇ ಸ್ಪರ್ಧೆಯಲ್ಲಿ ಗೆದ್ದಿದ್ದೆನಂತೆ’ ಎನ್ನುತ್ತಾ ರಾಹುಲ್ ಭಾಷಣ ಮುಂದುವರಿಸಿದರು
‘ನಮ್ಮ ತಂದೆಯ ಹತ್ಯೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾಗಿದ್ದ ನಳಿನಿ ಅವರನ್ನು ಪ್ರಿಯಾಂಕಾ ಒಮ್ಮೆ ಭೇಟಿಯಾಗಿದ್ದಳು. ನಳಿನಿಯನ್ನು ಪ್ರಿಯಾಂಕಾ ತಬ್ಬಿಕೊಂಡಿದ್ದಳು. ಭೇಟಿ ಬಳಿಕ ನನ್ನ ಬಳಿ ಬಂದಿದ್ದ ಪ್ರಿಯಾಂಕಾ ಬಹಳ ಭಾವುಕಳಾಗಿದ್ದಳು. ನಳಿನಿ ಬಗ್ಗೆ ಪ್ರಿಯಾಂಕಾ ಮರುಕ ಪಟ್ಟುಕೊಂಡಿದ್ದಳು. ಆಕೆ ಬೆಳೆದು ಬಂದ ರೀತಿ ಇದು. ಭಾರತದಲ್ಲಿ ಇದೇ ರೀತಿಯ ರಾಜಕೀಯದ ಅಗತ್ಯ ಇದೆ‘ ಎಂದು ರಾಹುಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.