ಕೊಚ್ಚಿ: ಕಾಂಗ್ರೆಸ್ ಕೈಗೊಂಡಿರುವ ಭಾರತ್ ಜೋಡೊ ಯಾತ್ರೆಗೆ ಕೇರಳದಲ್ಲಿ ಗುರುವಾರವೂ ಭಾರಿ ಬೆಂಬಲ ದೊರೆಯಿತು.ಆಲುವಾದಲ್ಲಿರುವ ಯೂನಿಯನ್ ಕ್ರಿಸ್ಚಿಯನ್ (ಯು.ಸಿ) ಕಾಲೇಜಿನಲ್ಲಿ 15ನೇ ದಿನದ ಯಾತ್ರೆಗೆ ಚಾಲನೆ ನೀಡಲಾಯಿತು.
ಮಹಾತ್ಮ ಗಾಂಧಿಯವರು 1925ರ ಮಾರ್ಚ್ 18ರಂದು ಯು.ಸಿ.ಕಾಲೇಜಿಗೆ ಭೇಟಿ ನೀಡಿದ್ದರು. ಆ ನೆನಪಿಗಾಗಿ ಕಾಲೇಜು ಆವರಣದಲ್ಲಿ ಮಾವಿನ ಸಸಿಯೊಂದನ್ನು ನೆಟ್ಟಿದ್ದರು. ಅದು ಬೃಹದಾಕಾರವಾಗಿ ಬೆಳೆದಿದ್ದು, ಆ ಮರಕ್ಕೆ ನಮನ ಸಲ್ಲಿಸುವ ಮೂಲಕ ರಾಹುಲ್ ಗಾಂಧಿ ಯಾತ್ರೆ ಆರಂಭಿಸಿದರು.
ಇದಕ್ಕೂ ಮುನ್ನ ಅವರು ಯಾತ್ರಿಗಳ ತಂಡವೊಂದು ಲಕ್ಷದ್ವೀಪದಿಂದ ತಂದಿದ್ದ ಸಸಿಯನ್ನು ಕಾಲೇಜು ಆವರಣದಲ್ಲಿ ನೆಟ್ಟರು.
ಬೆಳಿಗ್ಗೆ 6.30ಕ್ಕೆ ಆರಂಭವಾದ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ರಾಹುಲ್ ಜೊತೆ ಕಾರ್ಯಕರ್ತರು ಉತ್ಸುಕತೆಯಿಂದ ಹೆಜ್ಜೆ ಹಾಕಿದರು. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯು ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಪಕ್ಷದ ಧ್ವಜಗಳು ರಾರಾಜಿಸುತ್ತಿದ್ದವು.
ಮುಂಜಾನೆ ಅವಧಿಯ ಯಾತ್ರೆಯು 11 ಕಿ.ಮೀ ದೂರವನ್ನು ಕ್ರಮಿಸಿ ಅಂಗಮಾಲಿಯ ಕರುಕುಟ್ಟಿ ಕಾಪ್ಪೆಲಾ ವೃತ್ತದಲ್ಲಿ ಕೊನೆಗೊಂಡಿತು. ಸಂಜೆ 5 ಗಂಟೆಗೆ ಚಿರಂಗರಾ ಬಸ್ ನಿಲ್ದಾಣದಿಂದ ಆರಂಭವಾದ ಯಾತ್ರೆ ಚಾಲಕುಡಿ ಪುರಸಭೆ ಬಳಿ ಮುಕ್ತಾಯವಾಯಿತು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.