ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಕೇರಳದ ವಯನಾಡ್ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದು, ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರ ಉಳಿಸಿಕೊಳ್ಳಲಿದ್ದಾರೆ. ರಾಹುಲ್ ರಾಜೀನಾಮೆಯಿಂದ ತೆರವಾಗಲಿರುವ ವಯನಾಡ್ ಕ್ಷೇತ್ರದಲ್ಲಿ, ಅವರ ಸಹೋದರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ.
ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಎರಡು ಗಂಟೆ ನಡೆಸಿದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
ವಯನಾಡ್ ಸುರಕ್ಷಿತ ಕ್ಷೇತ್ರವಾಗಿದ್ದು, ಪ್ರಿಯಾಂಕಾ ಈ ಮೂಲಕ ಚುನಾವಣಾ ರಾಜಕಾರಣ ಪ್ರವೇಶಿಸಲಿ ಎಂದು ಪಕ್ಷ ತೀರ್ಮಾನಿಸಿತು.
ಆದರೆ, ರಾಹುಲ್ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗುವರೇ ಎಂಬ ಬಗ್ಗೆ ಪಕ್ಷ ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ರಾಹುಲ್ ಅವರೇ ಈ ಹೊಣೆ ಹೊರಬೇಕು ಎಂದ ಪಕ್ಷದ ಕಾರ್ಯಕಾರಿಣಿ ಸಮಿತಿ ನಿರ್ಣಯ ಅಂಗೀಕರಿಸಿತ್ತು.
‘ರಾಹುಲ್ ಅವರು ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿದ್ದರು. ನಿಯಮದಂತೆ, ಒಂದು ಕ್ಷೇತ್ರಕ್ಕೆ ಮಂಗಳವಾರದ ಒಳಗೆ ರಾಜೀನಾಮೆ ನೀಡಬೇಕು. ಇಂದು ಸಭೆಯಲ್ಲಿ ಈ ವಿಷಯ ಚರ್ಚಿಸಲಾಯಿತು. ರಾಹುಲ್ ರಾಯ್‌ಬರೇಲಿ ಕ್ಷೇತ್ರ ಉಳಿಸಿಕೊಳ್ಳುವರು’ ಎಂದು ಖರ್ಗೆ ಸಭೆಯ ಬಳಿಕ ತಿಳಿಸಿದರು.
‘ವಯನಾಡ್ ಕ್ಷೇತ್ರದ ಜೊತೆ ನನಗೆ ಭಾವನಾತ್ಮಕ ಬಾಂಧವ್ಯವಿದೆ. ಈಗ ಪ್ರಿಯಾಂಕಾ ಆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಾನೂ ನಿಯಮಿತವಾಗಿ ಭೇಟಿ ಕೊಡಲಿದ್ದೇನೆ. ಯಾವುದಾದರೂ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ನನಗೆ ಕಷ್ಟದ ಕೆಲಸವಾಗಿತ್ತು’ ಎಂದು ರಾಹುಲ್ ಹೇಳಿದರು.
ರಾಯ್‌ಬರೇಲಿ ಕ್ಷೇತ್ರ ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವು ಉತ್ತರ ಭಾರತದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಒತ್ತು ನೀಡಿರುವುದು ಸ್ಪಷ್ಟವಾಗಿದೆ.
ಪ್ರಿಯಾಂಕಾ ಅವರು ಚುನಾವಣಾ ರಾಜಕಾರಣವನ್ನು ಪ್ರವೇಶಿಸಲು ದಕ್ಷಿಣ ಭಾರತದಲ್ಲಿ ಸುರಕ್ಷಿತ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಅಂತಿಮಗೊಳಿಸಿದೆ. ಸಾರ್ವತ್ರಿಕ ಚುನಾವಣೆಯಲ್ಲಿಯೇ ಪ್ರಿಯಾಂಕಾ ಅವರು ರಾಯ್‌ಬರೇಲಿ ಅಥವಾ ಅಮೇಠಿಯಿಂದ ಸ್ಪರ್ಧಿಸುವರು ಎಂಬ ವದಂತಿ ದಟ್ಟವಾಗಿತ್ತು.
ದಕ್ಷಿಣ ಭಾರತದ ಕ್ಷೇತ್ರದಿಂದ ಪ್ರಿಯಾಂಕಾ ಅವರು ಚುನಾವಣಾ ರಾಜಕಾರಣ ಪ್ರವೇಶಿಸಿದಲ್ಲಿ ಗಾಂಧಿ ಕುಟುಂಬದ ಒಬ್ಬರು ದಕ್ಷಿಣ ಭಾರತ ಹಾಗೂ ಮತ್ತೊಬ್ಬರು ಉತ್ತರ ಭಾರತವನ್ನು ಪ್ರತಿನಿಧಿಸುವರು ಎಂಬ ಸಂದೇಶವನ್ನು ರವಾನಿಸಲು ಕಾಂಗ್ರೆಸ್ ಪಕ್ಷಕ್ಕೆ ನೆರವಾಗಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.