ಪುಣೆ: ‘ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಓದಿರುವುದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿ ಇದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದರು.
‘ದೇಶದ ಸಂವಿಧಾನವು ಪ್ರೀತಿ, ಏಕತೆ, ಸಮಾನತೆಯನ್ನು ಪ್ರತಿಪಾದಿಸಿದೆ. ಎಲ್ಲ ಧರ್ಮೀಯರನ್ನು ಸಮಾನವಾಗಿ ನೋಡಿದೆ. ಅಲ್ಲಿ ದ್ವೇಷದ ಉಲ್ಲೇಖವಿಲ್ಲ. ಪ್ರಧಾನಿ ಸಂವಿಧಾನ ಓದಿದ್ದರೆ ಅಲ್ಲಿ ಬರೆದಿರುವುದನ್ನು ಗೌರವಿಸುತ್ತಿದ್ದರು’ ಎಂದು ರಾಹುಲ್ ಹೇಳಿದರು.
ಮಹಾರಾಷ್ಟ್ರದ ಗೋಂಧಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನದಿಂದಾಗಿ ಇಂದು ಪ್ರಜಾಪ್ರಭುತ್ವ ಉಳಿದಿದೆ. ಹಲವು ಸಂಸ್ಥೆಗಳು ಸ್ಥಾಪನೆ ಆಗಿವೆ. ಆದರೆ, ಮೋದಿ ಹಾಗೂ ಬಿಜೆಪಿ, ಆರ್‌ಎಸ್‌ಎಸ್ ಇವುಗಳ ಮೇಲೆ ದಾಳಿ ನಡೆಸುತ್ತಿವೆ’ ಎಂದು ಟೀಕಿಸಿದರು.
‘ಬುದ್ಧ, ಬಸವಣ್ಣ, ನಾರಾಯಣ ಗುರು, ಶಿವಾಜಿ ಮಹಾರಾಜ್, ರಾಜಶ್ರೀ ಸಾಹು ಮಹಾರಾಜ್, ಜ್ಯೋತಿಬಾ ಫುಲೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಸಂವಿಧಾನ ಬಿಂಬಿಸಿದೆ’ ಎಂದು ಹೇಳಿದರು.
‘ರಾಜಕಾರಣದಲ್ಲಿ ಕೇವಲ ಹಿಂಸೆ ಮತ್ತು ದ್ವೇಷವನ್ನು ಉತ್ತೇಜಿಸಲಾಗುತ್ತಿದೆ. ಈ ಕಾರಣದಿಂದಾಗಿಯೇ ನಾವು ಪ್ರೀತಿಗೆ ಒತ್ತು ನೀಡಿದ್ದೇವೆ. ದ್ವೇಷವನ್ನು ಪ್ರೀತಿಯಿಂದ ಮಾತ್ರ ನಿರ್ಮೂಲನೆಗೊಳಿಸಲು ಸಾಧ್ಯ. ಇದು, ಕಾಂಗ್ರೆಸ್ ಪಕ್ಷ ಮತ್ತು ಮಹಾತ್ಮಗಾಂಧಿ ಅವರ ಚಿಂತನೆಯೂ ಹೌದು’ ಎಂದು ಹೇಳಿದರು.
‘ಬಿಜೆಪಿ, ಆರ್‌ಎಸ್‌ಎಸ್ ತಮ್ಮವರನ್ನೇ ಉನ್ನತ ಸಂಸ್ಥೆಗಳಿಗೆ ನೇಮಿಸಿದಾಗ ಆ ಸಂಸ್ಥೆ ದುರ್ಬಲಗೊಳ್ಳಲಿದೆ. ರಾಜ್ಯದಲ್ಲಿ ನೀವೇ ಚುನಾಯಿಸಿದ್ದ ಮಹಾವಿಕಾಸ ಆಘಾಡಿ ಸರ್ಕಾರವನ್ನು ಬಿಜೆಪಿ ಅಪಹರಿಸಿದಾಗಲೂ ಸಂವಿಧಾನವು ದುರ್ಬಲಗೊಂಡಿತು’ ಎಂದು ಹೇಳಿದರು.
ಎನ್‌ಡಿಎ ವಿರುದ್ಧ ಹರಿಹಾಯ್ದ ಅವರು, ಇದು ಸಿದ್ಧಾಂತಗಳ ನಡುವಿನ ಹೋರಾಟ. ಸಂವಿಧಾನ ಉಳಿಸಲು ನಡೆಯುತ್ತಿರುವ ಹೋರಾಟ. ದ್ವೇಷವನ್ನು ಪ್ರೀತಿಯಿಂದ ಸೋಲಿಸಲು ನಡೆಯುತ್ತಿರುವ ಹೋರಾಟ ಎಂದರು. ಚುನಾಯಿತ ಸರ್ಕಾರಗಳನ್ನು ಪದಚ್ಯುತಗೊಳಿಸುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ನಾಶಪಡಿಸುತ್ತಿವೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.