ADVERTISEMENT

ಸಂವಾದಕ್ಕೆ ಅವಕಾಶವಿಲ್ಲ, ಅದರ ಪರಿಣಾಮ ಅರ್ಥವಾಗುತ್ತಿಲ್ಲ: ರಾಹುಲ್ ಗಾಂಧಿ ಅಸಮಾಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2022, 11:07 IST
Last Updated 15 ಮೇ 2022, 11:07 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ    

ಉದಯಪುರ: ‘ದೇಶದಲ್ಲಿ ಸಂವಾದಕ್ಕೆ ಅನುಮತಿ ದೊರೆಯುತ್ತಿಲ್ಲ. ಸಂಭಾಷಣೆಗಳು ಗೊಂದಲಕ್ಕೀಡಾಗುತ್ತಿವೆ. ಇದರ ಪರಿಣಾಮವನ್ನು ನಾವು ಅರ್ಥಮಾಡಿಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವು ಜನರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸದಾ ಮುಕ್ತ ಅವಕಾಶ ನೀಡಿದೆ. ದೇಶದ ಬೇರೆ ಯಾವ ರಾಜಕೀಯ ಪಕ್ಷ ಸಂವಾದಕ್ಕೆ ಅವಕಾಶ ನೀಡಿದೆ? ಬಿಜೆಪಿ ಮತ್ತು ಆರ್‌ಎಸ್‌ಎಸ್ ಖಂಡಿತವಾಗಿಯೂ ಅವಕಾಶ ನೀಡುವುದಿಲ್ಲ. ಭಾರತವು ರಾಜ್ಯಗಳ ಒಕ್ಕೂಟ. ಈ ಒಕ್ಕೂಟವನ್ನು ರಚಿಸಲು ಜನರು ಒಂದಾಗಿದ್ದಾರೆ’ ಎಂದು ಹೇಳಿದ್ದಾರೆ.

ನಮ್ಮ ಜನಸಂಖ್ಯಾ ಶಕ್ತಿಯು ವಿಪತ್ತಾಗಿ ಪರಿಣಮಿಸುವ ಭೀತಿ ಸೃಷ್ಟಿಯಾಗಿದೆ. ಸರ್ಕಾರ ಅದಕ್ಕೆ ಹೊಣೆಯಾಗಲಿದೆ ಎಂದು ರಾಹುಲ್ ಹೇಳಿದ್ದಾರೆ.

ಜನರೊಂದಿಗಿನ ನಮ್ಮ ಸಂಪರ್ಕದ ಕೊಂಡಿ ಕಳಚಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದನ್ನು ನಾವು ಪುನಶ್ಚೇತನಗೊಳಿಸಬೇಕಿದೆ. ನಾವದನ್ನು ಬಲಪಡಿಸಬೇಕು. ಇದಕ್ಕೆ ಯಾವುದೇ ಅಡ್ಡದಾರಿಗಳಿಲ್ಲ. ಕಠಿಣ ಪರಿಶ್ರಮವೊಂದೇ ಮಾರ್ಗ ಎಂದು ಕಾಂಗ್ರೆಸ್ ನಾಯಕರನ್ನು, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

ಜನರೊಂದಿಗಿನ ಸಂಪರ್ಕ ಬಲಗೊಳಿಸಲು ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಪಕ್ಷವು ರಾಷ್ಟ್ರ ಮಟ್ಟದಲ್ಲಿ ಯಾತ್ರೆ ಹಮ್ಮಿಕೊಳ್ಳಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ ತಾಲ್ಲೂಕು ಮಟ್ಟದಲ್ಲಿ ಸಂಘವಿರೋಧಿ ಕಾರ್ಯಕರ್ತರನ್ನು ನೇಮಕ ಮಾಡಬೇಕು ಮತ್ತು ಅವರ ಮೂಲಕ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ತಿರುಗೇಟು ನೀಡಬೇಕು ಎಂಬ ಪ್ರಸ್ತಾವವು ಚಿಂತನ ಶಿಬಿರದಲ್ಲಿ ಮಂಡನೆಯಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿದ್ದವು.

ಪಕ್ಷದ ಹಿರಿಯ ಮುಖಂಡ ಸಲ್ಮಾನ್ ಖುರ್ಶಿದ್ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿಯು ಈ ಪ್ರಸ್ತಾವವನ್ನು ಇರಿಸಿದೆ ಎನ್ನಲಾಗಿತ್ತು. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಸಮಿತಿಯು ಮತ್ತಷ್ಟು ಸಲಹೆಗಳನ್ನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.