ನವದೆಹಲಿ: ‘ಸಂಸತ್ತಿನಲ್ಲಿ ಭದ್ರತಾ ಲೋಪ ಏಕೆ ಸಂಭವಿಸಿತು ಎಂದು ಅವಲೋಕಿಸಿದರೆ, ದೇಶದ ಇಂದಿನ ಪ್ರಮುಖ ಸಮಸ್ಯೆಯೇ ನಿರುದ್ಯೋಗ. ಹಣದುಬ್ಬರ ಮತ್ತು ನಿರುದ್ಯೋಗದಿಂದ ಹತಾಶರಾಗಿರುವ ಯುವಕರು ಈ ಕೆಲಸ ಮಾಡಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭದ್ರತಾ ಲೋಪದ ಬಗ್ಗೆ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿರುವ ಅವರು, ‘ಪ್ರಧಾನ ಮಂತ್ರಿಯವರ ನೀತಿಯಿಂದ ದೇಶದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 13ರಂದು ಕಲಾಪ ನಡೆಯುತ್ತಿರುವಾಗ ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್ ಕ್ಯಾನ್’ ಹಾರಿಸಿ ದಾಂಧಲೆ ಎಬ್ಬಿಸಿದ್ದರು. ಇದರಿಂದಾಗಿ, ಸದನದಲ್ಲಿ ಆತಂಕ ಸೃಷ್ಟಿಯಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಲಲಿತ್ ಮೋಹನ್ ಝಾ ಸೇರಿ ಒಟ್ಟು 6 ಜನರನ್ನು ಬಂಧಿಸಲಾಗಿದೆ.
ಆರೋಪಿಗಳಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಪಡೆದಿದ್ದು, ಮಣಿಪುರ ಹಿಂಸಾಚಾರ, ನಿರುದ್ಯೋಗ ಇವುಗಳಿಂದ ಬೇಸತ್ತು ಈ ಕೆಲಸ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಆರೋಪ ಅಲ್ಲಗೆಳೆದ ಕೆ.ಸಿ. ವೇಣುಗೋಪಾಲ್
ಭದ್ರತೆ ಉಲ್ಲಂಘನೆ ಪ್ರಕರಣವನ್ನು ಪ್ರತಿಪಕ್ಷಗಳು ರಾಜಕೀಯಗೊಳಿಸುತ್ತಿವೆ ಎಂಬ ಆರೋಪಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಅವರು ಅಲ್ಲಗಳೆದರು.
‘ಪ್ರಧಾನಿ ಮತ್ತು ಗೃಹಸಚಿವರು ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯವು ಭದ್ರತೆ ಉಲ್ಲಂಘನೆ ವಿಷಯವು ಲೋಕಸಭೆ ಮತ್ತು ಸ್ಪೀಕರ್ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ. ಆದರೆ ಇದೇ ಸಚಿವಾಲಯದಡಿ ಬರುವ ದೆಹಲಿ ಪೊಲೀಸರು ಇದನ್ನು ಭಯೋತ್ಪಾದನಾ ಕೃತ್ಯ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನು ನಾವು ಹೇಳಿಲ್ಲ’ ಎಂದು ಅವರು ವರದಿಗಾರರಿಗೆ ತಿಳಿಸಿದರು.
‘ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದ ಸಂದರ್ಭದಲ್ಲಿ ನಿರ್ಮಿಸಲಾಗಿರುವ ಹೊಸ ಸಂಸತ್ ಭವನವು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಸ್ಥಳವಾಗಿದೆ ಎಂದು ಅವರು ಹೇಳುತ್ತಾರೆ. ಇಂತಹ ಕಡೆಯೇ ಭದ್ರತೆಯ ಉಲ್ಲಂಘನೆ ಆಗಿದೆ. ಆರೋಪಿಗಳು ಸದನದೊಳಗೆ ಪ್ರವೇಶಿಸಲು ಶಿಫಾರಸು ಮಾಡಿದ ಬಿಜೆಪಿ ಸಂಸದ ಯಾರು’ ಎಂದು ಕೇಳಿದರು.
ಆರೋಪಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ ಎಂಬುದನ್ನು ವರದಿಗಾರರು ಗಮನಕ್ಕೆ ತಂದಾಗ, ಮಹಾತ್ಮಾ ಗಾಂಧಿ ಮತ್ತು ರಾಷ್ಟ್ರೀಯ ನಾಯಕರನ್ನು ಅವಮಾನಿಸಿದ ಬಿಜೆಪಿ ಪರವಾಗಿ ಜನರು ನಿಂತ ಅನೇಕ ನಿದರ್ಶನಗಳಿವೆ. ‘ಸಿಂಹ ಮತ್ತು ಇತರರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲೂ ಬಹುದು’ ಎಂದು ವೇಣುಗೋಪಾಲ್ ವ್ಯಂಗ್ಯವಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.