ADVERTISEMENT

ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ: ರಾಹುಲ್ ಗಾಂಧಿ, ಶಶಿ ತರೂರ್ ಪೊಲೀಸ್ ವಶಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2022, 7:46 IST
Last Updated 5 ಆಗಸ್ಟ್ 2022, 7:46 IST
ಪಕ್ಷದ ನಾಯಕರ ಜತೆ ರಾಹುಲ್ ಗಾಂಧಿ – ಪಿಟಿಐ ಚಿತ್ರ
ಪಕ್ಷದ ನಾಯಕರ ಜತೆ ರಾಹುಲ್ ಗಾಂಧಿ – ಪಿಟಿಐ ಚಿತ್ರ   

ನವದೆಹಲಿ: ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಶಿ ತರೂರ್, ಕೆ.ಸಿ. ವೇಣುಗೋ‍ಪಾಲ್ ಹಾಗೂ ಹಲವು ಮಂದಿ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಹೋರಾಟ ಹಮ್ಮಿಕೊಂಡಿದೆ. ಪ್ರತಿಭಟನೆ ಅಂಗವಾಗಿ ಪಕ್ಷದ ನಾಯಕರು ದೆಹಲಿಯ ಸಂಸತ್‌ ಭವನದಿಂದ ರಾಷ್ಟ್ರಪತಿ ಭವನಕ್ಕೆ ಜಾಥಾ ಕೈಗೊಂಡರು. ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಜಾಥಾವನ್ನು ಪೊಲೀಸರು ಅರ್ಧದಲ್ಲೇ ತಡೆದರು.

‘ಕಾಂಗ್ರೆಸ್‌ನ ಎಲ್ಲ ಸಂಸದರು ಬೆಲೆ ಏರಿಕೆ, ಹಣದುಬ್ಬರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ರಾಷ್ಟ್ರಪತಿ ಭವನಕ್ಕೆ ಜಾಥಾ ಕೈಗೊಂಡಿದ್ದೇವೆ. ಆದರೆ, ನಮ್ಮನ್ನು ಅಲ್ಲಿಗೆ ತೆರಳಲು ಬಿಡುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದು ನಮ್ಮ ಕೆಲಸ. ಕೆಲವು ಸಂಸದರನ್ನು ವಶಕ್ಕೆ ಪಡೆದಿದ್ದಾರೆ’ ಎಂದು ವಿಜಯ್ ಚೌಕ್‌ನಲ್ಲಿ ರಾಹು‌ಲ್ ಗಾಂಧಿ ತಿಳಿಸಿದ್ದಾರೆ.

ಪ್ರತಿಭಟನೆಯ ಭಾಗವಾಗಿ ಕಾಂಗ್ರೆಸ್ ನಾಯಕರು, ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ ಭವನದ ಬಳಿ ಆಗಮಿಸಿದ್ದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ಕುರಿತು ಚಿಂತಿಸುತ್ತಿಲ್ಲ. 4–5 ಮಂದಿಯ ಹಿತ ಕಾಯಲಷ್ಟೇ ಕೆಲಸ ಮಾಡುತ್ತಿದೆ. ಬೆಲೆ ಏರಿಕೆ ತಡೆಯಲು ಮತ್ತು ಜನರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.