ವಯನಾಡು: 2014 ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ನರೇಗಾವನ್ನು 'ಅಪಹಾಸ್ಯ ಮಾಡಿದ್ದ' ನರೇಂದ್ರ ಮೋದಿ ಅವರು, ಹಿಂದಿನ ಯುಪಿಎ ಸರ್ಕಾರವು ಜಾರಿಗೆ ತಂದ ಮಹತ್ವಾಕಾಂಕ್ಷೆಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ದೇಶದ ಜನರ 'ಸಂರಕ್ಷಕ' ಪಾತ್ರವನ್ನು ವಹಿಸಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ತಮ್ಮ ಕ್ಷೇತ್ರದಲ್ಲಿನ ಪುಥಡಿ ಗ್ರಾಮ ಪಂಚಾಯಿತಿಯಲ್ಲಿ ಕುಟುಂಬಶ್ರೀ ಸಂಗಮಮ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಬಡವರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತದೆ ಮತ್ತು ಆಡಳಿತಾರೂಢ ಬಿಜೆಪಿಯ ಆಲೋಚನೆಯು ಅತ್ಯಂತ ಶಕ್ತಿಶಾಲಿಗಳನ್ನೇ ಇನ್ನಷ್ಟು ಬಲಗೊಳಿಸುವುದಾಗಿದೆ ಎಂದು ಆರೋಪಿಸಿದರು.
'ಮೋದಿ ಪ್ರಧಾನಿಯಾದಾಗ ಸಂಸತ್ತಿನಲ್ಲಿ ನಮ್ಮೆಲ್ಲರ ಮುಂದೆ ನರೇಗಾವನ್ನು ಲೇವಡಿ ಮಾಡಿದ್ದರು. ನರೇಗಾ (MGNREGA) ಜಾರಿಯು ಭಾರತೀಯ ಜನರಿಗೆ ಮಾಡಿದ ಅವಮಾನ ಎಂದಿದ್ದರು'. ಆದರೆ'ದೇಶದಲ್ಲಿ ಕೊರೊನಾ ವೈರಸ್ ಹರಡುವ ಸಂದರ್ಭದಲ್ಲಿ ಯೋಜನೆಯು ಕೆಲಸ ಮತ್ತು ಹಣವನ್ನು ಹೆಚ್ಚಿಸಲು ನೆರವಾಯಿತು ಮತ್ತು ಕೋವಿಡ್ ಸಮಯದಲ್ಲಿ ನರೇಗಾ ಮಾತ್ರ ಜನರನ್ನು ರಕ್ಷಿಸುವ ಮುಖ್ಯ ಪಾತ್ರ ವಹಿಸಿದೆ ಎಂಬುದನ್ನು ಅವರು ಒಪ್ಪಿಕೊಳ್ಳಬೇಕು' ಎಂದು ಒತ್ತಾಯಿಸಿದರು.
ಕೋವಿಡ್ ಸಮಯದಲ್ಲಿ ಬೆಲೆ 'ಗಗನಕ್ಕೇರಿತು', ಕೂಲಿ ಉದ್ಯೋಗಾವಕಾಶಗಳನ್ನು ಖಾತರಿಪಡಿಸುವ ಮೂಲಕ ಗ್ರಾಮೀಣ ಭಾರತದಲ್ಲಿ ವಾಸಿಸುವ ಅತ್ಯಂತ ದುರ್ಬಲ ಜನರಿಗೆ ಸಾಮಾಜಿಕ ರಕ್ಷಣೆ ನೀಡುವ ನರೇಗಾಗೆ ಬೇಡಿಕೆ ಹೆಚ್ಚಾಯಿತು. ಸ್ವಸಹಾಯ ಸಂಘಗಳು ಮತ್ತು ಎಂಜಿಎನ್‌ಆರ್‌ಇಜಿಎ ಎರಡನ್ನೂ ಯುಪಿಎ ಸರ್ಕಾರ 'ಉಡುಗೊರೆಯಾಗಿ' ತಂದಿಲ್ಲ. ಬದಲಿಗೆ 'ನಮ್ಮ ಜನರನ್ನು ಬಲಶಾಲಿಗಳನ್ನಾಗಿ ಮಾಡುವ ಸಬಲೀಕರಣದ ಸಾಧನಗಳಾಗಿವೆ' ಎಂದು ತಿಳಿಸಿದರು.
ಕೌಶಲ್ಯರಹಿತವಾದ ಕೆಲಸ ಮಾಡಲು ವಯಸ್ಕ ಸದಸ್ಯರು ಮುಂದಾಗುವ ಪ್ರತಿ ಗ್ರಾಮೀಣ ಮನೆಯವರಿಗೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿ ವೇತನದ ಉದ್ಯೋಗವನ್ನು ಒದಗಿಸಲು ನರೇಗಾವನ್ನು ಜಾರಿಗೆ ತಂದಾಗ, ಅನುಕಂಪ ತೋರುವ ಮೂಲಕ ನಮ್ಮ ಜನರನ್ನು ಏಕೆ ಹಾಳು ಮಾಡುತ್ತಿರಾ ಎಂದು ಅನೇಕ ಜನರು ಪ್ರಶ್ನಿಸಿದ್ದರು. ಎಂಜಿಎನ್‌ಆರ್‌ಇಜಿಎ ಯೋಜನೆ ಜನರನ್ನು ಹಾಳುಮಾಡಲಿದೆ ಎಂದು ಹಲವರು ಹೇಳಿಕೊಂಡರು. ಆದರೆ ಅದೇ ಜನರು ಈಗ ಸರ್ಕಾರವು 'ದೊಡ್ಡ ಉದ್ಯಮಗಳಿಗೆ ಲಕ್ಷ ಕೋಟಿ ರೂಪಾಯಿಗಳನ್ನು ನೀಡುತ್ತಿರುವಾಗ' ಮತ್ತು 'ಬೃಹತ್ ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣಗೊಳಿಸುತ್ತಿರುವಾಗ' ಏನನ್ನು ಹೇಳುತ್ತಿಲ್ಲ ಎಂದು ಆರೋಪಿಸಿದರು.
ಎಂಜಿಎನ್‌ಆರ್‌ಇಜಿಎ ಯೋಜನೆಯ ಅನುಷ್ಠಾನವು ಯುಪಿಎ ಅವಧಿಯಲ್ಲಿ 'ಭರ್ಜರಿ ಆರ್ಥಿಕ ಬೆಳವಣಿಗೆಗೆ' ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.