ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಶುಕ್ರವಾರ ಹೇಳಿದ್ದಾರೆ.
ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಅವರನ್ನು ಶ್ಲಾಘಿಸಿರುವ ಕಮಲನಾಥ್, ಅವರು (ರಾಹುಲ್) ಅಧಿಕಾರದ ಆಸೆಯಿಂದ ಅಲ್ಲ. ಬದಲಾಗಿ ದೇಶದ ಜನಸಾಮಾನ್ಯರ ಹಿತಕ್ಕಾಗಿ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ಗಾಂಧಿ ಕುಟುಂಬ ಹೊರತುಪಡಿಸಿ ಬೇರೆ ಯಾವ ಕುಟುಂಬವು ದೇಶಕ್ಕಾಗಿ ಇಷ್ಟು ತ್ಯಾಗ ಮಾಡಿಲ್ಲ. ಜಗತ್ತಿನ ಇತಿಹಾಸದಲ್ಲೇ ಸುದೀರ್ಘ ಯಾತ್ರೆಯನ್ನು ಯಾರೂ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಮರಳಿದರೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಕಮಲನಾಥ್ ಭರವಸೆ ನೀಡಿದರು. ಅಲ್ಲದೆ ಪಕ್ಷಕ್ಕೆ ದ್ರೋಹ ಬಗೆದವರಿಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿದರು.
ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಮುಂದಿನ ವರ್ಷ ನಡೆಯುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.