ನವದೆಹಲಿ:ದೇಶದ ಆರ್ಥಿಕತೆ ಮೇಲೆ ಕೊರೊನಾ ವೈರಸ್ ಪರಿಣಾಮ ಕುರಿತಂತೆಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಜೊತೆ ವಿಡಿಯೊ ಸಂವಾದ ನಡೆಸಿದರು.
ಈ ವಿಡಿಯೊ ಸಂವಾದ ಮಂಗಳವಾರ ಬೆಳಗ್ಗೆ 9 ಗಂಟೆ ರಾಹುಲ್ ಗಾಂಧಿ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಯಿತು. ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಈ ಸಂವಾದವನ್ನು ವೀಕ್ಷಿಸಿದರು.
ದೇಶದಲ್ಲಿ ಕೊರೊನಾ ವೈರಸ್ ಪರಿಣಾಮ ಎದುರಾಗಿರುವ ಆರ್ಥಿಕ ಸಮಸ್ಯೆ ಮತ್ತು ಇದರಿಂದ ಚೇತರಿಸಿಕೊಳ್ಳಬಹುದಾದ ಮಾರ್ಗೋಪಾಯಗಳ ಕುರಿತಂತೆ ರಾಹುಲ್ ಮತ್ತು ಅಭಿಜಿತ್ ಬ್ಯಾನರ್ಜಿ ಚರ್ಚೆ ನಡೆಸಿದರು.
ಆರ್ಥಿಕತೆ ಚೇತರಿಕೆಗೆ ಹಾಗೂ ಬಡ ಜನರು ಹಸಿವಿನಿಂದ ಬಳಲುವುದನ್ನು ತಪ್ಪಿಸಲು ಅಭಿಜಿತ್ ಬ್ಯಾನರ್ಜಿ ಕೆಲವು ಸಲಹೆಗಳನ್ನು ನೀಡಿದರು.
* ಭಾರತ ಮತ್ತಷ್ಟು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸುವ ಅವಶ್ಯಕತೆ ಇದೆ.
* ಘೋಷಣೆ ಮಾಡುವ ಆರ್ಥಿಕ ಪ್ಯಾಕೇಜಿನ ಯೋಜನೆಗಳನ್ನು ತ್ವರಿತಗತಿಯಲ್ಲಿ ಮತ್ತು ಈ ಯೋಜನೆಗಳು ಹಂತ ಹಂತವಾಗಿ ಜಾರಿಯಾಗಬೇಕು.
* ದೇಶದ ನಾಗರಿಕರಿಗೆ ಪಡಿತರ ವಿತರಣೆಯನ್ನು ಹೆಚ್ಚಿಸುವ ಮೂಲಕ ಹಸಿವನ್ನು ನೀಗಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು.
* ಆರ್ಥಕ ಹಿಂಜರಿತದಿಂದ ಹೊರಬರಲು ಭಾರತಕ್ಕೆ ಹಲವು ದಿನಗಳೇ ಬೇಕಾಗಲಿವೆ.
* ಸ್ತಬ್ದವಾಗಿರುವ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಮತ್ತು ಉದ್ದಿಮೆಗಳನ್ನು ಸರ್ಕಾರ ಕೈಹಿಡಿಯಬೇಕಿದೆ.
* ಸರ್ಕಾರ ಹಣಕಾಸು ಉತ್ತೇಜನ ನೀಡುವ ಮೂಲಕ ಮತ್ತೆ ಆರ್ಥಿಕತೆಯನ್ನು ಸರಿದಾರಿಗೆ ತರಬೇಕು.
ಸಂವಾದದಲ್ಲಿ ರಾಹುಲ್ ಗಾಂಧಿ ಕೂಡ ಹಲವು ಪ್ರಶ್ನೆಗಳನ್ನು ಎತ್ತುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ದೇಶದಲ್ಲಿ ಬಡವರು ಮತ್ತು ಶ್ರಮಿಕ ಜನರು ತೊಂದರೆಯಲ್ಲಿದ್ದಾರೆ ಸರ್ಕಾರ ಮೊದಲ ಪ್ರಾಶಸ್ತ್ಯವಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆಗಳಿಗೂ ಸರ್ಕಾರ ಹಣಕಾಸು ನೆರವು ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು. ಇಬ್ಬರ ನಡುವಿನ ಸಂವಾದ ಸುಮಾರು 27 ನಿಮಿಷಗಳಿವರೆಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.