ನವದೆಹಲಿ: ಭಾರತ್ ಜೋಡೊ ಯಾತ್ರೆ ಸಮಾರೋಪದ ಅಂಗವಾಗಿ ಜನವರಿ 30ರಂದು ಶ್ರೀನಗರದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಶ್ರೀನಗರದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ಜನವರಿ 30ರಂದು ಬೆಳಿಗ್ಗೆ 10 ಗಂಟೆಗೆ ರಾಹುಲ್ ಗಾಂಧಿ, ತ್ರಿವರ್ಣ ಧ್ವಜಾರೋಹಣ ಮಾಡಲಿದ್ದಾರೆ. ಅದೇ ದಿನ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ), ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ತಮ್ಮ ತಮ್ಮ ಪಕ್ಷದ ಕಚೇರಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಪ್ರಾದೇಶಿಕ ಭಾಷೆಯಲ್ಲಿ ಸುಪ್ರೀಂ ತೀರ್ಪು: ಮೋದಿ ಶ್ಲಾಘನೆ
ಕಳೆದ ವರ್ಷ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದ ಭಾರತ್ ಜೋಡೊ ಯಾತ್ರೆ, 12 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,970 ಕಿ.ಮೀ. ದೂರ ಕ್ರಮಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನವರಿ 30ರಂದು ಮುಕ್ತಾಯಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತ್ ಜೋಡೊ ಯಾತ್ರೆಗೆ ಲಕ್ಷಾಂತರ ಜನರಿಂದ ಅಭೂತಪೂರ್ವ ಬೆಂಬಲ ದೊರಕಿದೆ. ದೇಶದ ಜನತೆಯಲ್ಲಿ ರಾಹುಲ್ ಗಾಂಧಿ ಅವರ ಪ್ರೀತಿ ಮತ್ತು ಏಕತೆಯ ಸಂದೇಶವನ್ನು ಸಾರಿದೆ. ಸಮಾಜದ ಎಲ್ಲ ವಿಭಾಗದ ಜನರ ಬೆಂಬಲ ಹಾಗೂ ಪಾಲುದಾರಿಕೆಯಿಂದ ಐತಿಹಾಸಿಕ ಯಾತ್ರೆಯಾಗಿ ಪರಿವರ್ತನೆಗೊಂಡಿದ್ದು, ದೇಶದ ರಾಜಕಾರಣದಲ್ಲಿ ಬದಲಾವಣೆಗೆ ಕಾರಣವಾಗಿದೆ ಎಂದು ಹೇಳಿದರು.
ಪ್ರತಿಪಕ್ಷಗಳ ಒಗ್ಗಟ್ಟನ್ನು ಪ್ರದರ್ಶಿಸುವ ಭಾಗವಾಗಿ, ಭಾರತ್ ಜೋಡೊ ಯಾತ್ರೆಯ ಸಮಾರೋಪದಲ್ಲಿ 23 ಪಕ್ಷಗಳನ್ನು ಆಹ್ವಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.