ADVERTISEMENT

ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ: ಚಾಲಕರ ‘ಮನದ ಮಾತು’ ಆಲಿಕೆ

ಪಿಟಿಐ
Published 23 ಮೇ 2023, 5:24 IST
Last Updated 23 ಮೇ 2023, 5:24 IST
   

ಚಂಡೀಗಢ/ನವದೆಹಲಿ: ಟ್ರಕ್‌ ಚಾಲಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೆಹಲಿಯಿಂದ ಚಂಡೀಗಢಕ್ಕೆ ಟ್ರಕ್‌ನಲ್ಲಿ ಪ್ರಯಾಣ ನಡೆಸಿದರು ಎಂದು ಪಕ್ಷವು ಮಂಗಳವಾರ ಹೇಳಿದೆ.

ತಮ್ಮ ನೆಚ್ಚಿನ ಬಿಳಿ ಬಣ್ಣದ ಟಿ– ಶರ್ಟ್‌ ಧರಿಸಿದ್ದ ರಾಹುಲ್‌ ಅವರು ಸೋಮವಾರ ರಾತ್ರಿ ಟ್ರಕ್‌ನಲ್ಲಿ ಕುಳಿತು ಪ್ರಯಾಣಿಸಿರುವ ಮತ್ತು ಢಾಬಾದಲ್ಲಿ ಕುಳಿತು ಚಾಲಕರೊಂದಿಗೆ ಸಂವಾದ ನಡೆಸಿರುವ ವಿಡಿಯೊ ಬಿಡುಗಡೆ ಮಾಡಲಾಗಿದೆ. ಟ್ರಕ್‌ ಪ್ರಯಾಣಿಕರ ಸಮಸ್ಯೆಗಳನ್ನು ಅರಿಯಲು ರಾಹುಲ್‌ ಅವರು ದೆಹಲಿಯಿಂದ ಚಂಡೀಗಢದವರೆಗೆ ಟ್ರಕ್‌ನಲ್ಲಿ ತೆರಳಿದರು ಎಂದು ಕಾಂಗ್ರೆಸ್‌ ಪಕ್ಷವು ಟ್ವೀಟ್‌ ಮಾಡಿದೆ.

ದೇಶದ ರಸ್ತೆಗಳಲ್ಲಿ ಸುಮಾರು 90 ಲಕ್ಷ ಟ್ರಕ್‌ ಚಾಲಕರು ಕಾರ್ಯನಿರತರಾಗಿದ್ದಾರೆ. ಅವರೆಲ್ಲರೂ ತಮ್ಮದೇ ಆದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಧ್ವನಿಯಾಗಲು, ಅವರ ‘ಮನದ ಮಾತು’ಗಳನ್ನು ರಾಹುಲ್‌ ಆಲಿಸಿದರು ಎಂದು ಕಾಂಗ್ರೆಸ್‌ ಹೇಳಿದೆ. 

ADVERTISEMENT

ಮಂಗಳವಾರ ನಸುಕಿನಲ್ಲಿ ಅಂಬಾಲಾ– ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಂಬಾಲಾದ ಗುರುದ್ವಾರ ಸಮೀಪ ಟ್ರಕ್‌ ನಿಲ್ಲಿಸಿ ರಾಹುಲ್‌ ಪ್ರಾರ್ಥನೆ ಸಲ್ಲಿಸಿದರು. ಟ್ರಕ್‌ ಚಾಲಕರೊಂದಿಗೆ ರಾಹುಲ್‌ ಸಭೆ ನಡೆಸಿರುವ ಚಿತ್ರಗಳನ್ನು ‍ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆ ಟ್ವಿಟ್‌ ಮಾಡಿದ್ದಾರೆ.

ಶಿಮ್ಲಾದಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಕೆಲ ಸಮಯ ಕಳೆಯಲು ಶಿಮ್ಲಾದತ್ತ ಹೊರಟಿರುವ ರಾಹುಲ್‌, ಮಾರ್ಗದುದ್ದಕ್ಕೂ ಟ್ರಕ್‌ ಚಾಲಕರೊಂದಿಗೆ ಸಂವಾದ ನಡೆಸುತ್ತಾ, ಅವರ ಸಮಸ್ಯೆಗಳನ್ನು ಆಲಿಸಲು ನಿರ್ಧಾರ ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.