ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಗುರುತನ್ನು ಬಹಿರಂಗಪಡಿಸಿದ ಆರೋಪದಡಿ ಲಾಕ್ ಮಾಡಲಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ಒಂದು ವಾರದ ಬಳಿಕ, ಶನಿವಾರ ಅನ್‌ಲಾಕ್ ಮಾಡಲಾಗಿದೆ.
ಕಳೆದ ವಾರ ದೆಹಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದೊಂದಿಗಿನ ಫೋಟೊವನ್ನು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟರ್ ಲಾಕ್ ಮಾಡಿತ್ತು. ಇದಕ್ಕೆ ವಿರೋಧ ಪಕ್ಷದ ಸದಸ್ಯರಿಂದ ಭಾರಿ ಆಕ್ಷೇಪವೂ ವ್ಯಕ್ತವಾಗಿತ್ತು. ಟ್ವಿಟರ್ ಪಕ್ಷಪಾತಿಯಾಗಿದೆ ಎಂದೂ ಅವರು ದೂರಿದ್ದರು.
ಇದರ ಬೆನ್ನಲ್ಲೇ ಟ್ವಿಟರ್, ರಾಹುಲ್ ಗಾಂಧಿ ಅವರ ಖಾತೆಯನ್ನು ಶನಿವಾರ ಅನ್‌ಲಾಕ್ ಮಾಡಿದೆ. ಜತೆಗೆ ಸಂತ್ರಸ್ತೆಯ ಕುಟುಂಬದವರ ಫೋಟೊವನ್ನು ಹಂಚಿಕೊಂಡಿದ್ದ ಪಕ್ಷದ ಇತರ ಮುಖಂಡರ ಖಾತೆಯನ್ನು ಕೂಡ ಮರುಸ್ಥಾಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
‘ದೇಶದ ರಾಜಕಾರಣದಲ್ಲಿ ಟ್ವಿಟರ್ ಹಸ್ತಕ್ಷೇಪ ಮಾಡುತ್ತಿದೆ. ನನ್ನ ಟ್ವಿಟರ್ ಖಾತೆಯನ್ನು ಲಾಕ್ ಮಾಡಿರುವುದು ದೇಶದ ಪ್ರಜಾಸತ್ತಾತ್ಮಕ ರಚನೆಯ ಮೇಲೆ ನಡೆಸಿದ ದಾಳಿ’ ಎಂದು ರಾಹುಲ್ ಗಾಂಧಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಶುಕ್ರವಾರ ಹರಿಹಾಯ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.