ADVERTISEMENT

ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಕೋರಲು ರಾಹುಲ್‌ ಸಿದ್ಧ ಎಂದ ವಕೀಲ ಸಿಂಘ್ವಿ

ಏಜೆನ್ಸೀಸ್
Published 30 ಏಪ್ರಿಲ್ 2019, 11:42 IST
Last Updated 30 ಏಪ್ರಿಲ್ 2019, 11:42 IST
   

ನವದೆಹಲಿ: ‘ರಫೇಲ್‌ ಹಗರಣದಲ್ಲಿ ಚೌಕಿದಾರನೇ ಕಳ್ಳ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ ಎನ್ನುವ ಮೂಲಕ ನ್ಯಾಯಾಂಗ ನಿಂಧನೆ ಪ್ರಕರಣದಲ್ಲಿ ಸಿಲುಕಿರುವ ರಾಹುಲ್‌ ಗಾಂಧಿ ಅವರು, ತಮ್ಮ ಹೇಳಿಕೆಯ ಕುರಿತು ವಿಷಾದಕ್ಕೆ ಬದಲಾಗಿ ಕ್ಷಮೆಯನ್ನೇ ಕೋರುವುದಾಗಿ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಅಫಿಡವಿಟ್‌ ಸಲ್ಲಿಸಿರುವ ರಾಹುಲ್‌ ಗಾಂಧಿ ಅವರು, ‘ಉದ್ದೇಶ ಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ. ಹೇಳಿಕೆಗೆ ವಿಷಾದಿಸುತ್ತೇನೆ,’ ಎಂದು ಕೋರ್ಟ್‌ಗೆ ತಿಳಿಸಿದ್ದರು. ಆದರೆ, ರಾಹುಲ್‌ ಅವರ ಅಫಿಡವಿಟ್‌ನಲ್ಲಿದ್ದ ‘ವಿಷಾದ’ ಎಂಬ ಪದಕ್ಕೆ ಬಿಜೆಪಿ ಆಕ್ಷೇಪಿಸಿತ್ತು.

ಇಂದಿನ ವಿಚಾರಣೆಯಲ್ಲಿ ರಾಹುಲ್‌ ಪರ ವಾದ ಮಂಡಿಸಿದ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ರಾಹುಲ್‌ ಗಾಂಧಿ ಅವರು ವಿಷಾದದ ಬದಲಿಗೆ ಹೊಸ ಅಫಿಡವಿಟ್‌ ಸಲ್ಲಿಸಿ ನ್ಯಾಯಾಲಯದ ಕ್ಷಮೆ ಕೋರಲಿದ್ದಾರೆ,’ ಎಂದು ಕೋರ್ಟ್‌ಗೆ ತಿಳಿಸಿದರು.

ADVERTISEMENT

‘ವಿಷಾದದ ಪದದ ಅರ್ಥವನ್ನು ನಾನು ಪದಕೋಶದಲ್ಲಿ ಹುಡುಕಿದೆ. ವಿಷಾದವೆಂದರೆ ಅದು ಕ್ಷಮಾಪಣೆ ಎಂದೇ ಅರ್ಥ. ಆದರೂ ನಾವು ಕ್ಷಮೆ ಕೋರುತ್ತೇವೆ,’ ಎಂದು ವಕೀಲ ಸಿಂಘ್ವಿ ತಿಳಿಸಿದರು.

‘ಪೀಠ ಎಲ್ಲವನ್ನೂ ಆಲಿಸಿದೆ. ಮತ್ತೊಂದು ಅಫಿಡವಿಟ್‌ ಸಲ್ಲಿಸಲು ಸಿಂಘ್ವಿ ಬಯಸಿದ್ದಾರೆ. ಅಫಿಡವಿಟ್‌ ಸಲ್ಲಿಸಲು ಅವರು ಮುಕ್ತರು. ಅದನ್ನು ಅಂಗೀಕರಿಸುವ ಬಗ್ಗೆ ಮುಂದಿನ ಸೋಮವಾರ ನಿರ್ಧಾರ ಪ್ರಕಟಿಸಲಾಗುವುದು,’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರನ್ನು ಒಳಗೊಂಡ ಪೀಠ ಹೇಳಿತು.

ರಕ್ಷಣಾ ಇಲಾಖೆಯಿಂದ ಸೋರಿಕೆಯಾಗಿರುವ ದಾಖಲೆಗಳನ್ನು ರಫೇಲ್‌ ಒಪ್ಪಂದದ ತೀರ್ಪಿನ ಮರುಪರಿಶೀಲನಾ ಅರ್ಜಿಯಲ್ಲಿ ಪರಾಮರ್ಶೆಗೆ ಪರಿಗಣಿಸಲಾಗುವುದು ಎಂದು ಸುಪ್ರೀಂ ಆದೇಶ ನೀಡಿದ ಬೆನ್ನಲ್ಲೇ ಕೇರಳದ ವಯನಾಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಹುಲ್‌ ಗಾಂಧಿ ಅವರು, ‘ಚೌಕಿದಾರನೇ ಕಳ್ಳ ಎಂದು ಕೋರ್ಟ್‌ ಕೂಡ ಹೇಳಿದೆ,’ ಎಂದು ಹೇಳಿದ್ದರು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ರಾಹುಲ್‌ ಗಾಂಧಿ ಅವರು ತಪ್ಪಾಗಿ ವಿವರಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.