ಅಮೇಠಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏ.26ರ ಬಳಿಕ ಅಮೇಠಿಗೆ ಬಂದು ಜನರನ್ನು ಜಾತಿ ಹೆಸರಲ್ಲಿ ವಿಭಜಿಸುತ್ತಾರೆ. ಬಳಿಕ ದೇಗುಲಗಳಿಗೆ ಭೇಟಿ ನೀಡುತ್ತಾರೆ. ಇವರ ಬಗ್ಗೆ ಎಚ್ಚರದಿಂದಿರಿ ಎಂದು ಸ್ಥಳೀಯ ಸಂಸದರೂ ಆಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಇಲ್ಲಿನ ಬೆಟುವಾ ಹಾಗೂ ಭಾದರ್‌ನಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ‘ಏ.26ರಂದು ವಯನಾಡಿನಲ್ಲಿ ಮತದಾನ ನಡೆದ ಬಳಿಕ, ಇಲ್ಲಿಗೆ ಬಂದು, ಅಮೇಠಿ ನನ್ನ ಕುಟುಂಬ ಎಂದು ಹೇಳುತ್ತಾರೆ. ಸಮಾಜದಲ್ಲಿ ಜಾತೀಯತೆಯ ಬೆಂಕಿಯನ್ನು ಹೊತ್ತಿಸುತ್ತಾರೆ’ ಎಂದು ಆರೋಪಿಸಿದರು.
ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನವನ್ನು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ತಿರಸ್ಕರಿಸಿತ್ತು. ಆದರೆ ಇಲ್ಲಿಗೆ ಬಂದು ದೇಗುಲಗಳಿಗೆ ಭೇಟಿ ನೀಡುತ್ತಾರೆ. ನೀವು ಇದರ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಜನರಿಗೆ ಹೇಳಿದರು.
‘ರಾಹುಲ್ ಗಾಂಧಿಯವರು ಯಾವತ್ತೂ ಅಮೇಠಿಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಿಲ್ಲ. ಸಂಸತ್ತಿನಲ್ಲೂ ಅವರು ಕಾಣಿಸುತ್ತಿರಲಿಲ್ಲ’ ಎಂದರು.
‘10 ವರ್ಷದ ಯುಪಿಎ ಅವಧಿ ಸೇರಿ 15 ವರ್ಷ ರಾಹುಲ್ ಗಾಂಧಿ ಇಲ್ಲಿನ ಸಂಸದರಾಗಿದ್ದರೂ ಇಲ್ಲಿನ ಜನರಿಗೆ ಕುಡಿಯುವ ನೀರೂ ಸಿಕ್ಕಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವೇ ಅಮೇಠಿಯ ಜನರಿಗೆ ಕುಡಿಯುವ ನೀರು ಸಿಕ್ಕಿದೆ’ ಎಂದು ಅವರು ಹೇಳಿದರು.
2004ರಿಂದ 15 ವರ್ಷಗಳ ಕಾಲ ಅಮೇಠಿಯಿಂದ ಸಂಸದರಾಗಿದ್ದ ರಾಹುಲ್ ಗಾಂಧಿ 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲುಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.