ಅಮೇಠಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರ ಮತ್ತು ಸಲ್ಲಿಕೆ ಮಾಡಿರುವ ದಾಖಲೆಗಳೆಲ್ಲವೂ ಸರಿಯಾಗಿವೆಎಂದು ಅಮೇಠಿ ರಿಟರ್ನಿಂಗ್ ಆಫೀಸರ್ ರಾಮ್ ಮನೋಹರ್ ಮಿಶ್ರಾ ಹೇಳಿರುವುದಾಗಿ ಎಎನ್‍ಐ ವರದಿ ಮಾಡಿದೆ.
ಕಂಪನಿಯೊಂದರ ನೋಂದಣಿ ವೇಳೆ ರಾಹುಲ್ ಗಾಂಧಿ ಅವರು ತಾವು ಬ್ರಿಟನ್ ಪೌರತ್ವ ಹೊಂದಿರುವುದಾಗಿ ದಾಖಲೆ ನೀಡಿದ್ದಾರೆ ಎಂದೂ, ಶೈಕ್ಷಣಿಕ ದಾಖಲೆಗಳಲ್ಲಿ ರಾಹುಲ್ ಗಾಂಧಿ ಅವರ ಹೆಸರಿಲ್ಲ ಎಂದುಆರೋಪಿಸಿ ಅಮೇಠಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಈ ಸಂಬಂಧ ರಾಹುಲ್ ಅವರ ನಾಮಪತ್ರದ ಪರಿಶೀಲನೆ ಸೋಮವಾರ ನಡೆದಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಠಿ ಕ್ಷೇತ್ರದಿಂದ ಸಲ್ಲಿಸಿರುವ ನಾಮಪತ್ರದ ಜತೆಗೆ ಕೊಟ್ಟಿರುವ ಪ್ರಮಾಣಪತ್ರದಲ್ಲಿ ಅವರ ಪೌರತ್ವ ಮತ್ತು ವಿದ್ಯಾರ್ಹತೆ ಬಗೆಗಿನ ವಿವರಗಳು ತಾಳೆಯಾಗುವುದಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಧ್ರುವಲಾಲ್ ಎಂಬವರು ಆಕ್ಷೇಪ ಎತ್ತಿದ್ದರು.ರಾಹುಲ್ ಗಾಂಧಿ ಅವರ ಉಮೇಧುವಾರಿಕೆಯನ್ನು ಆಕ್ಷೇಪಿಸಿ ನಾಲ್ಕು ಮಂದಿ ದೂರು ದಾಖಲಿಸಿದ್ದಾರೆ.
ರಾಹುಲ್ ಅವರು ಹೂಡಿಕೆ ಮಾಡಿದ್ದಾರೆ ಎನ್ನಲಾದ ಬ್ರಿಟನ್ ಕಂಪನಿಯೊಂದರ ದಾಖಲೆಯನ್ನು ಧ್ರುವಲಾಲ್ ಅವರ ವಕೀಲ ರವಿಪ್ರಕಾಶ್ ಮಾಧ್ಯಮದ ಮುಂದೆ ಪ್ರದರ್ಶಿಸಿ,ರಾಹುಲ್ ಅವರು ಬ್ರಿಟನ್ ಪ್ರಜೆ ಎಂದು ಈ ದಾಖಲೆಯಲ್ಲಿ ಇದೆ.ಈ ಕಂಪನಿಯುಐದು ವರ್ಷ ಅಸ್ತಿತ್ವದಲ್ಲಿತ್ತು. ಕಂಪನಿಯು ಲಾಭ ಗಳಿಸಿರುವ ಸಾಧ್ಯತೆ ಇದೆ. ಹಾಗಿದ್ದರೂ ಪ್ರಮಾಣಪತ್ರದಲ್ಲಿ ಈ ಲಾಭದ ಉಲ್ಲೇಖ ಇಲ್ಲ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ‘ಇನ್ನೊಂದು ದೇಶದ ನಾಗರಿಕರು ಭಾರತದಲ್ಲಿ ಸ್ಪರ್ಧಿಸಲುಸಂವಿಧಾನದಲ್ಲಿ ಅವಕಾಶ ಕಲ್ಪಿಸಿಲ್ಲ,’ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು. ರಾಹುಲ್ಯಾವ ಆಧಾರದ ಮೇಲೆ ಬ್ರಿಟಷ್ ಪೌರತ್ವ ಪಡೆದರು? ಹಾಗಿದ್ದೂ, ಭಾರತದ ನಾಗರಿಕತ್ವ ಸಿಕ್ಕಿದ್ದು ಹೇಗೆ? ಈ ವಿಚಾರದಲ್ಲಿ ಸ್ಪಷ್ಟನೆ ಸಿಗುವವ ವರೆಗೆ ಅವರ ನಾಮಪತ್ರವನ್ನು ಅಂಗೀಕರಿಸದಂತೆ ರವಿಪ್ರಕಾಶ್ ಚುನಾವಣಾಧಿಕಾರಿಗೆ ಮನವಿ ಮಾಡಿದ್ದರು.
‘2003 ರಿಂದ 2009ರ ಅವಧಿಯಲ್ಲಿ ಬ್ರಿಟನ್ ಸಂಸ್ಥೆ ಹೊಂದಿದ್ದ ಆಸ್ತಿ ವಿವರವನ್ನು ರಾಹುಲ್ ಗಾಂಧಿ ನೀಡಿಲ್ಲ. ಇನ್ನೊಂದೆಡೆ ಅಫಿಡವಿಟ್‌ನಲ್ಲಿ ಸಲ್ಲಿಸಿರುವ ವಿದ್ಯಾರ್ಹತೆ ದಾಖಲೆಗಳಲ್ಲಿ ಹೊಂದಾಣಿಕೆಯಿಲ್ಲ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಅವರ ದಾಖಲೆಗಳಲ್ಲಿ ರಾಹುಲ್ ವಿನ್ಸಿ ಎಂದು ಇದೆ. ಆದರೆ, ರಾಹುಲ್ ಗಾಂಧಿ ಹೆಸರಲ್ಲಿ ಯಾವ ದಾಖಲೆಗಳೂ ಲಭ್ಯವಿಲ್ಲ. ರಾಹುಲ್ ವಿನ್ಸಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಒಬ್ಬರೇ? ಅಥವಾ ಬೇರೆ ಬೇರೆಯವರೇ ಎಂಬುದು ನಮ್ಮ ಪ್ರಶ್ನೆ. ಹಾಗೇನಾದರೂ ಬೇರೆ ಬೇರೆಯಾಗಿದ್ದಲ್ಲಿ ರಾಹುಲ್ ಗಾಂಧಿ ಅವರು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ನೈಜ ದಾಖಲೆಗಳನ್ನು ಸಲ್ಲಿಸಬೇಕು,’ ಎಂದು ರವಿ ಪ್ರಕಾಶ್ ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.