ADVERTISEMENT

ಲಡಾಖ್‌ನಲ್ಲಿ ಚೀನಾದಿಂದ ಅತಿಕ್ರಮ: ರಾಹುಲ್ ಹೇಳಿಕೆ ನಿಜವಾಗಿದೆ– ಸಂಜಯ್ ರಾವುತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2023, 7:14 IST
Last Updated 29 ಆಗಸ್ಟ್ 2023, 7:14 IST
ರಾಹುಲ್ ಗಾಂಧಿ ಮತ್ತು ಸಂಜಯ್ ರಾವುತ್
ರಾಹುಲ್ ಗಾಂಧಿ ಮತ್ತು ಸಂಜಯ್ ರಾವುತ್   

ಮುಂಬೈ: ಭಾರತದ ಅರುಣಾಚಲ ಪ್ರದೇಶ ರಾಜ್ಯ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಭೂಪ್ರದೇಶದ ಭಾಗವಾಗಿ ತೋರಿಸುವ ‘ಸ್ಟ್ಯಾಂಡರ್ಡ್ ಮ್ಯಾಪ್’ ಅನ್ನು ಚೀನಾ ಬಿಡುಗಡೆ ಮಾಡಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್, ಲಡಾಖ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆ ನಿಜವಾಗಿದ್ದು, ಕೇಂದ್ರ ಸರ್ಕಾರಕ್ಕೆ ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಿ ಎಂದು ಮಂಗಳವಾರ ಸವಾಲು ಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವುತ್, ಲಡಾಖ್‌ನ ಪ್ಯಾಂಗಾಂಗ್ ಕಣಿವೆಗೆ ಚೀನಾ ಮಿಲಿಟರಿ ಪ್ರವೇಶಿಸಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ನಿಜವಾಗಿದೆ ಎಂದು ಹೇಳಿದರು.

‘ನಮ್ಮ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬ್ರಿಕ್ಸ್ ಶೃಂಗಸಭೆ ಸಂದರ್ಭ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ್ದರು. ಶಾಂತಿ ಕಾಪಾಡುವ ಬಗ್ಗೆ ಉಭಯ ದೇಶಗಳು ಒ‍ಪ್ಪಿಗೆ ಸೂಚಿಸಿವೆ ಎಂದು ವರದಿಯಾಗಿತ್ತು. ಆದರೆ, ಆ ಭೇಟಿ ಬಳಿಕವೂ ಚೀನಾ ಈ ನಕ್ಷೆ ಬಿಡುಗಡೆ ಮಾಡಿದೆ. ಲಡಾಖ್‌ನ ಪ್ಯಾಂಗಾಂಗ್ ಕಣಿವೆಯನ್ನು ಚೀನಾ ಪ್ರವೇಶಿಸಿದೆ ಎಂದು ರಾಹುಲ್ ಗಾಂಧಿ ಹೇಳಿರುವುದು ನಿಜವೆಂದು ಸಾಬೀತಾಗಿದೆ. ಚೀನಾ ಅರುಣಾಚಲವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದೆ. ನಿಮಗೆ (ಕೇಂದ್ರ ಸರ್ಕಾರ) ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ’ಎಂದು ರಾವುತ್ ಒತ್ತಾಯಿಸಿದ್ದಾರೆ.

ADVERTISEMENT

ಆಗಸ್ಟ್ 28ರಂದು ಚೀನಾ ಬಿಡುಗಡೆ ಮಾಡಿದ ನಕ್ಷೆಯಲ್ಲಿ ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶವನ್ನು ತೋರಿಸಲಾಗಿದೆ. 1962ರ ಯುದ್ಧದಲ್ಲಿ ಅಕ್ಸಾಯ್ ಚಿನ್ ಭೂಪ್ರದೇಶವನ್ನು ವಶಪಡಿಸಿಕೊಂಡಿದ್ದು, ಅದೂ ತನ್ನ ದೇಶದ ಭಾಗವಾಗಿದೆ ಎಂದು ಚೀನಾ ಹೇಳಿಕೊಂಡಿದೆ. ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಸಹ ಹೊಸ ನಕ್ಷೆಯಲ್ಲಿ ಚೀನಾದ ಭೂಪ್ರದೇಶವೆಂದು ಬಿಂಬಿಸಲಾಗಿದೆ.

ಇದನ್ನೂ ಓದಿ..

ಗಡಿ ವಿಚಾರದಲ್ಲಿ ಕ್ಯಾತೆ ತೆಗೆದ ಚೀನಾ: ಅರುಣಾಚಲ ಪ್ರದೇಶ ಸೇರಿಸಿ ನಕ್ಷೆ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.