ನವದೆಹಲಿ: 'ಭಾರತವು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದು ಅಲ್ಲ' ಎಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದು, 'ಅವರ ಜ್ಞಾನ ಮತ್ತು ಆ ವಿಚಾರದ ಬಗೆಗಿನ ತಿಳಿವಳಿಕೆ ತುಂಬಾ ಕಡಿಮೆಯಿದೆ' ಎಂದಿದ್ದಾರೆ.
ರಾಹುಲ್ ಗಾಂಧಿ ಕುರಿತಾಗಿ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುತ್ವವಿಲ್ಲದೇ ಹಿಂದೂ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ. ಹಿಂದೂ ಮತ್ತು ಹಿಂದುತ್ವ ಎಂಬ ಪದಗಳ ನಡುವೆ ವ್ಯತ್ಯಾಸವನ್ನು ಎಳೆದು ತರುವ ಮೂಲಕ, ಅವರು ದೇಹವನ್ನು ಅದರ ಆತ್ಮದಿಂದ ಬೇರ್ಪಡಿಸುತ್ತಿದ್ದಾರೆ. ಈ ವಿಚಾರವಾಗಿ ಅವರು ಅತ್ಯಂತ ಕಳಪೆ ಜ್ಞಾನ ಮತ್ತು ಪರಿಕಲ್ಪನೆಯನ್ನು ಹೊಂದಿದ್ದಾರೆ' ಎಂದರು.
ರಾಜಸ್ಥಾನದ ರ‍್ಯಾಲಿಯೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಭಾರತವು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದು ಅಲ್ಲ. ಹಿಂದುತ್ವವಾದಿಗಳನ್ನು ಅಧಿಕಾರದಿಂದ ಉಚ್ಚಾಟಿಸಿ ದೇಶದಲ್ಲಿ ಹಿಂದೂಗಳ ಆಳ್ವಿಕೆ ನೆಲೆಗೊಳಿಸಬೇಕು. ನಾನು ಹಿಂದೂ, ಹಿಂದುತ್ವವಾದಿಯಲ್ಲ' ಎಂದು ಭಾನುವಾರ ಹೇಳಿದ್ದರು.
'ಹಿಂದೂವಿನ ಹೃದಯವು ಪ್ರೀತಿಯಿಂದ ತುಂಬಿರುತ್ತದೆ. ಹಿಂದುತ್ವವಾದಿಯ ಹೃದಯದಲ್ಲಿ ಭೀತಿ ಮತ್ತು ದ್ವೇಷ ಇರುತ್ತದೆ. ಹಿಂದೂವಿಗೆ ಯಾರ ಭಯವೂ ಇರುವುದಿಲ್ಲ, ಆತ ಎಲ್ಲರನ್ನೂ ಅಪ್ಪಿಕೊಳ್ಳುತ್ತಾನೆ, ಎಲ್ಲ ಧರ್ಮಗಳನ್ನೂ ಗೌರವಿಸುತ್ತಾನೆ ಮತ್ತು ಸತ್ಯವನ್ನು ಅರಸುತ್ತಾನೆ’ ಎಂದು ರಾಹುಲ್ ಪ್ರತಿಪಾದಿಸಿದ್ದರು.
'ಅವರಿಗೆ (ರಾಹುಲ್ ಗಾಂಧಿ) ಒಳ್ಳೆಯ ಬುದ್ಧಿ ಬರಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ' ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ಕಾರಿಡಾರ್‌ಗೆ ಭೇಟಿ ನೀಡಿದ್ದ ವಿಚಾರವಾಗಿ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವಿರುದ್ಧವೂ ಕಿಡಿಕಾರಿದ ಅವರು, 'ಅವರು ತಮ್ಮ ಹೇಳಿಕೆಗಳಿಂದ ದೇಶವನ್ನು 'ಅನಾಗರಿಕ'ವನ್ನಾಗಿ ಮಾಡಬಾರದು' ಎಂದು ಹೇಳಿದ್ದಾರೆ.
'ಅಂತ್ಯ ಸಮೀಪಿಸಿದಾಗ ಜನರು ಬನಾರಸ್‌ನಲ್ಲಿ ಉಳಿದುಕೊಳ್ಳುತ್ತಾರೆ' ಎಂದು ಸೋಮವಾರ ಯಾದವ್ ಹಾಸ್ಯಾಸ್ಪದವಾಗಿ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.