ನವದೆಹಲಿ: ಕೇರಳದ ವಯನಾಡು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದ ಸಂತ್ರಸ್ತರಾದವರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದ್ದಾರೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಯಾತ್ರೆಯನ್ನು ಮೊಟಕುಗೊಳಿಸಿ ಅವರು ಇಂದು ಸಂಜೆಯೇ ವಯನಾಡಿಗೆ ದೌಡಾಯಿಸಿದ್ದಾರೆ.
ಶುಕ್ರವಾರ ವಯನಾಡು ಜಿಲ್ಲೆಯ ಕುರುವಾ ಬಳಿ ಎಕೊ ಟೂರಿಸಂ ಗೈಡ್ ಒಬ್ಬರು ಕಾಡಾನೆ ದಾಳಿಗೆ ಸಿಕ್ಕು ಚಿಕಿತ್ಸೆ ಫಲಿಸದೇ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಲ್ಲದೇ ಕಳೆದ ವಾರವೂ ವಯನಾಡಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟಿದ್ದರು.
ಆನೆ ದಾಳಿಗೆ ತುತ್ತಾಗಿ ಮೃತರಾದವರ ಕುಟುಂಬದವರನ್ನು ಭೇಟಿಯಾಗಲು ಮತ್ತು ವಯನಾಡು ಜಿಲ್ಲೆಯಲ್ಲಿ ಇತ್ತೀಚೆಗೆ ಉಂಟಾಗಿರುವ ಕಾಡುಪ್ರಾಣಿ–ಮಾನವ ಸಂಘರ್ಷದ ಕುರಿತು ಪರಿಶೀಲನೆ ನಡೆಸಲು ರಾಹುಲ್ ಗಾಂಧಿ ಅಲ್ಲಿಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ 3 ಗಂಟೆಗೆ ವಾರಾಣಸಿಯಿಂದ ಯಾತ್ರೆ ಪುನಾರಂಭವಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಯನಾಡು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ತೊಂದರೆಯಿಂದ ಸ್ಥಳೀಯರು ಮತ್ತು ಅರಣ್ಯ ಇಲಾಖೆ ನಡುವೆ ಕಳೆದ ಕೆಲವು ದಿನಗಳಿಂದ ಜಟಾಪಟಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.