ADVERTISEMENT

ಭಾರತ ಒಗ್ಗೂಡಿಸಿ ಯಾತ್ರೆ ಕನ್ಯಾಕುಮಾರಿಯಿಂದ ಶುರು

ಪಿಟಿಐ
Published 8 ಸೆಪ್ಟೆಂಬರ್ 2022, 12:58 IST
Last Updated 8 ಸೆಪ್ಟೆಂಬರ್ 2022, 12:58 IST
ಕನ್ಯಾಕುಮಾರಿಯಲ್ಲಿ ಬುಧವಾರ ಆರಂಭವಾದ ‘ಭಾರತ ಒಗ್ಗೂಡಿಸಿ ಯಾತ್ರೆ’ಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿದರು    –ಪಿಟಿಐ ಚಿತ್ರ
ಕನ್ಯಾಕುಮಾರಿಯಲ್ಲಿ ಬುಧವಾರ ಆರಂಭವಾದ ‘ಭಾರತ ಒಗ್ಗೂಡಿಸಿ ಯಾತ್ರೆ’ಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿದರು    –ಪಿಟಿಐ ಚಿತ್ರ   

ಕನ್ಯಾಕುಮಾರಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಜನರನ್ನು ಸಂಪರ್ಕಿಸುವ ‘ಭಾರತ ಒಗ್ಗೂಡಿಸಿ ಯಾತ್ರೆ’ಗೆ ಕಾಂಗ್ರೆಸ್‌ ಇಲ್ಲಿ ಬುಧವಾರ ಚಾಲನೆ ನೀಡಿದೆ. ಪಕ್ಷದ ನಾಯಕರು ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ರಾಹುಲ್ ಗಾಂಧಿ ಅವರಿಗೆ ತ್ರಿವರ್ಣ ಧ್ವಜವನ್ನು ನೀಡುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು.

ಕನ್ಯಾಕುಮಾರಿಯಲ್ಲಿ ಆಯೋಜಿಸ ಲಾಗಿದ್ದ ಈ ಕಾರ್ಯಕ್ರಮದಲ್ಲಿ, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್, ಛತ್ತೀಸಗಡ ಮುಖ್ಯ ಮಂತ್ರಿ ಭೂಪೇಶ್ ಬಘೇಲ್‌, ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಮಿಳುನಾಡು ಕಾಂಗ್ರೆಸ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಶಾಸಕರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ADVERTISEMENT

ದೇಶದಾದ್ಯಂತ 50,000 ಜನರು ಈ ಯಾತ್ರೆಯಲ್ಲಿ ಭಾಗಿಯಾಗಲು ಹೆಸರು ನೋಂದಾಯಿಸಿದ್ದಾರೆ. ಆದರೆ 120 ಮಂದಿ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದವರೆಗೆ ಯಾತ್ರೆ ನಡೆಸಲಿದ್ದಾರೆ.ಈ 120 ಜನರ ತಂಡವು ಗುರುವಾರ ಬೆಳಿಗ್ಗೆ 7 ಗಂಟೆ ಮತ್ತು ಮಧ್ಯಾಹ್ನ 3.30ಕ್ಕೆ ಎರಡು ತಂಡಗಳಲ್ಲಿ ಇಲ್ಲಿನ ವಿವೇಕಾನಂದ ಪಾಲಿಟೆಕ್ನಿಕ್‌ನಿಂದ ಯಾತ್ರೆ ಆರಂಭಿಸಲಿದೆ.

ಪ್ರತಿದಿನ 20–23 ಕಿ.ಮೀ.ನಷ್ಟು ದೂರವನ್ನು ಈ ತಂಡವು ಕ್ರಮಿಸಲಿದ್ದು, ಹಾದಿ ಮಧ್ಯೆ ಜನರ ಜತೆ ಸಂವಾದ ನಡೆಸಲಿದೆ. ಜತೆಗೆ ಜನರು ಈ ಯಾತ್ರೆಗೆ ಜತೆಯಾಗಲಿದ್ದಾರೆ.ಈ ತಂಡವು ಸೆಪ್ಟೆಂಬರ್ 11ರಂದು ಕೇರಳ ತಲುಪಲಿದ್ದು, ರಾಜ್ಯದ ಉದ್ದಕ್ಕೂ 18 ದಿನ ಯಾತ್ರೆ ನಡೆಸಲಿದೆ. ನಂತರ ಸೆಪ್ಟೆಂಬರ್ 30ರಂದು ಕರ್ನಾಟಕವನ್ನು ತಲುಪಲಿದೆ. ಕರ್ನಾಟಕ ದಲ್ಲಿ ಒಟ್ಟು 21 ದಿನ ಯಾತ್ರೆ ನಡೆಯಲಿದೆ.

‘ಧ್ವಜ ಎಲ್ಲ ಧರ್ಮ, ಭಾಷೆಯ ಜನರ ಪ್ರತೀಕ’
ತ್ರಿವರ್ಣ ಧ್ವಜವು ದಾಳಿಗೆ ಒಳಗಾಗುತ್ತಿದೆ. ಕೆಲವು ಜನರು ಅದನ್ನು ಮೂರು ಬಣ್ಣಗಳ ಮತ್ತು ಒಂದು ಚಕ್ರವಿರುವ ಧ್ವಜ ಎಂದಷ್ಟೇ ಭಾವಿಸಿದ್ದಾರೆ. ಆದರೆ ಅದು ಅದಕ್ಕಿಂತಲೂ ಹೆಚ್ಚು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ದೇಶದ ಪ್ರತಿಯೊಬ್ಬ ಜನ, ಪ್ರತಿ ಧರ್ಮ ಮತ್ತು ಭಾಷೆಯ ಜನರನ್ನು ತ್ರಿವರ್ಣ ಧ್ವಜ ಪ್ರತಿನಿಧಿಸುತ್ತದೆ. ದೇಶದ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಈ ಧ್ವಜ ಖಾತರಿ
ಪಡಿಸುತ್ತದೆ. ಇಂತಹ ಧ್ವಜ ಇಂದು ದಾಳಿಗೆ ಒಳಗಾಗುತ್ತಿದೆ. ಹಾಗಾಗಿ ಈ ಧ್ವಜಕ್ಕೆ ವಂದಿಸಿದರೆ ಸಾಲದು. ಧ್ವಜದಲ್ಲಿ ಅಡಕವಾಗಿರುವ ಚಿಂತನೆಗಳು ಮತ್ತು ಮೌಲ್ಯಗಳನ್ನು ರಕ್ಷಿಸುವ ಅಗತ್ಯವಿದೆ’ ಎಂದು ರಾಹುಲ್ ಕರೆ ನೀಡಿದ್ದಾರೆ.

‘ಈ ಧ್ವಜ ನಮಗೆ ಸುಲಭವಾಗಿ ಸಿಕ್ಕಿಲ್ಲ. ಹಲವು ಜನರ ಪ್ರಾಣತ್ಯಾಗ ಮತ್ತು ಹೋರಾಟದಿಂದ ಇದನ್ನು ಗಳಿಸಲಾಗಿದೆ. ಈ ಧ್ವಜ ಮಾತ್ರವಲ್ಲ, ದೇಶದ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳ ಮೇಲೂ ಬಿಜೆಪಿ ದಾಳಿ ನಡೆಸುತ್ತಿದೆ’ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷರು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದರು. ಬಿಜೆಪಿ ಸಹ ಬ್ರಿಟಿಷರ ನೀತಿಯನ್ನೇ ಅನುಸರಿಸುತ್ತಿದೆ. ಅಂದು ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ನಿಯಂತ್ರಿಸುತ್ತಿತ್ತು. ಇಂದು ಮೂರು–ನಾಲ್ಕು ಕಂಪನಿಗಳು ಇಡೀ ದೇಶವನ್ನು ನಿಯಂತ್ರಿಸುತ್ತಿವೆ ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.