ನವದೆಹಲಿ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿ ವೇಳೆ ಇಬ್ಬರು ಅಗ್ನಿವೀರರು ಮೃತಪಟ್ಟ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮೃತ ಅಗ್ನಿವೀರರ ಕುಟುಂಬಕ್ಕೆ ಇತರೆ ಹುತಾತ್ಮ ಯೋಧರಿಗೆ ಸಿಗುವ ಪಿಂಚಣಿ ಮತ್ತು ಸೌಲಭ್ಯಗಳು ಸಿಗುವುದಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಡುವುದಾಗಿ ಅವರು ಹೇಳಿದ್ದಾರೆ.
ತರಬೇತಿ ವೇಳೆ ಅಗ್ನಿವೀರರಾದ ಗೊಹಿಲ್ ವಿಶ್ವರಾಜ್ ಸಿಂಗ್ ಮತ್ತು ಸೈಫತ್ ಶೀಟ್ ಮೃತಪಟ್ಟಿರುವುದು ದುರಂತ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.
ಈ ಘಟನೆಯು ಅಗ್ನವೀರ್ ಯೋಜನೆ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆ ಎತ್ತಿದೆ. ಬಿಜೆಪಿ ಸರ್ಕಾರ ಈ ಪ್ರಶ್ನೆಗೆ ಉತ್ತರಿಸುವಲ್ಲಿ ವಿಫಲವಾಗಿದೆ. ಮೃತ ಅಗ್ನಿವೀರರಾದ ಗೊಹಿಲ್ ಮತ್ತು ಗೋಹತ್ ಕುಟುಂಬಗಳು ಇತರೆ ಯೋಧರ ರೀತಿಯೇ ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಪಡೆಯುವರೇ? ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
‘ಅಗ್ನಿವೀರರು ಮತ್ತು ಇತರೆ ಯೋಧರ ಜವಾಬ್ದಾರಿ ಮತ್ತು ತ್ಯಾಗವು ಒಂದೇ ಆಗಿರುವಾಗ, ಅಗ್ನೀವೀರರ ಕುಟುಂಬಗಳು ಇತರೆ ಯೋಧರ ರೀತಿ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಪಡೆಯುವುದಿಲ್ಲವೇಕೆ? ಅವರು ಹುತಾತ್ಮರಾದ ಬಳಿಕ ಏಕೀ ತಾರತಮ್ಯ? ಎಂದು ಪ್ರಶ್ನಿಸಿದ್ದಾರೆ.
ಅಗ್ನಿಪಥ ಯೋಜನೆಯು ಸೇನೆಗೆ ಮಾಡುವ ಅನ್ಯಾಯವಾಗಿದ್ದು, ನಮ್ಮ ಧೈರ್ಯಶಾಲಿ ಹುತಾತ್ಮ ಯೋಧರಿಗೆ ಮಾಡುವ ಅಪಮಾನ ಎಂದಿದ್ದಾರೆ.
ಒಬ್ಬ ಯೋಧನಿಗಿಂತ ಮತ್ತೊಬ್ಬ ಯೋಧನ ಜೀವ ಏಕೆ ಹೆಚ್ಚು ಮೌಲ್ಯಯುತವಾಗುತ್ತದೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಉತ್ತರಿಸಬೇಕು ಎಂದಿದ್ದಾರೆ.
‘ಈ ಅನ್ಯಾಯದ ವಿರುದ್ಧ ಒಟ್ಟಾಗಿ ನಿಲ್ಲೋಣ. ಬಿಜೆಪಿ ಸರ್ಕಾರದ ಅಗ್ನಿವೀರ್ ಯೋಜನೆಯನ್ನು ಕಿತ್ತೊಗೆಯಲು, ನಮ್ಮ ದೇಶ ಮತ್ತು ಯೋಧರ ಭವಿಷ್ಯವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಜೈ ಜವಾನ್ ಚಳವಳಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೈದಾನದ ಶೂಟಿಂಗ್ ತರಬೇತಿ ವೇಳೆ ಅಗ್ನಿವೀರರಾದ ಗೊಹಿಲ್ ಮತ್ತು ಸೈಫತ್ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.