ಕೊರ್ಬಾ(ಛತ್ತೀಸಗಢ): ಭಾರತ ಜೋಡೊ ನ್ಯಾಯ ಯಾತ್ರೆ ಸಾಗುತ್ತಿದ್ದ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಳಿ ನಡೆದ ರಾಹುಲ್ ಗಾಂಧಿ ಅವರ ಕೈಕುಲುಕಿದ್ದಾರೆ.
ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಪ್ರೀತಿಯಲ್ಲಿ ದೊಡ್ಡ ಶಕ್ತಿಯಿದೆ ಎಂದು ಬರೆದುಕೊಂಡಿದೆ.
‘ರಾಹುಲ್ ಗಾಂಧಿ ಅವರ ಯಾತ್ರೆ ಸಾಗುತ್ತಿದ್ದ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದರು. ಅವರನ್ನು ಕಂಡ ರಾಹುಲ್ ಗಾಂಧಿ ವಾಹನದಿಂದ ಇಳಿದು ಅವರ ಕೈಕುಲುಕಿದ್ದಾರೆ’ ಎಂದು ತಿಳಿಸಿದೆ.
ಕೇಸರಿ ಶಾಲುಗಳನ್ನು ಧರಿಸಿ, ಹನುಮಾನ್ ಧ್ವಜವನ್ನು ಹಿಡಿದ ಗುಂಪೊಂದು ಮಾರ್ಗದ ಬದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ರಾಹುಲ್ ಗಾಂಧಿ ಅವರು ಬರುತ್ತಿದ್ದಂತೆ 'ಜೈ ಶ್ರೀ ರಾಮ್', 'ಮೋದಿ ಮೋದಿ' ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕಾಣಬಹುದಾಗಿದೆ.
ಕಳೆದ ವಾರ ಒಡಿಶಾದಿಂದ ಛತ್ತೀಸಗಢ ಪ್ರವೇಶಿಸಿದ ನ್ಯಾಯ ಯಾತ್ರೆ, ಭಾನುವಾರ ರಾಯಗಢದಿಂದ ಯಾತ್ರೆ ಪ್ರಾರಂಭಿಸಿತ್ತು. ಎರಡನೇ ದಿನವಾದ ಇಂದು ಕೊರ್ಬಾದಿಂದ ಆರಂಭವಾದ ಯಾತ್ರೆ ಕಟ್ಘೋರಾ ಮಾರ್ಗವಾಗಿ ಸಾಗಿ ಧೋಡಿಪಾರಾ ಮೂಲಕ ಹಾದು ಹೋಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.