ನವದೆಹಲಿ: ಹಣದುಬ್ಬರ ಹೆಚ್ಚಳವಾಗುತ್ತಿದೆ. ಸರ್ಕಾರ ಬಡವರ ಬಗ್ಗೆ ಕಾಳಜಿಯೇ ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ದೆಹಲಿಯ ಆಜಾದ್‌ಪುರ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ತರಕಾರಿ ಹಾಗೂ ಹಣ್ಣು ವ್ಯಾಪಾರಿಗಳೊಂದಿಗೆ ನಡೆಸಿದ ಮಾತುಕತೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
‘ಮಂಡಿಯಲ್ಲಿ ಯಾಕೆ ಮಂದಿ ಇದೆ(ಬೇಡಿಕೆ ಕುಸಿತ) ಎಂದು ತಿಳಿಯಲು ಆಜಾದ್‌ಪುರ ಮಂಡಿಯಲ್ಲಿ ಕೂಲಿಗಳನ್ನು, ವರ್ತಕರನ್ನು ಹಾಗೂ ರೈತರನ್ನು ಮಾತನಾಡಿಸಿದೆ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
’ಮಾರುಕಟ್ಟೆಯಲ್ಲಿ ಕೂಲಿಯಾಗಾಗಿ ದುಡಿಯುತ್ತಿರುವ ಜತಾ ಶಂಕರ್ ಅವರು ಒಂದು ವರ್ಷದಿಂದ ಮನೆಗೆ ಹೋಗಿಲ್ಲ. ಈ ಕೆಲಸದಿಂದಾಗಿ ಕುಟುಂಬವನ್ನೂ ಭೇಟಿ ಮಾಡಿಲ್ಲ. ಒಂದು ವೇಳೆ ಹೋದರೆ ಕೂಲಿ ಸಿಗುವುದಿಲ್ಲ. ಹಣದುಬ್ಬರದ ಈ ದಿನದಲ್ಲಿ ಬದುಕುವುದು ಕಷ್ಟ’ ಎಂದು ರಾಹುಲ್ ಬರೆದುಕೊಂಡಿದ್ದಾರೆ.
‘ನಷ್ಟದಿಂದಾಗಿ ವಾರಕ್ಕೆ ಎರಡು–ಮೂರು ರಾತ್ರಿ ಹಸಿವಿನಿಂದ ಮಲಗಬೇಕಾದ ಪರಿಸ್ಥಿತಿ ಇದೆ ಎಂದು ಅಂಗಡಿ ಮಾಲೀಕರೊಬ್ಬರು ಹೇಳಿದರು. ದೇಶದ ಬಡವರ ಸಮಸ್ಯೆಗಳನ್ನು ಪರಿಹರಿಸುವುದು ಬಿಡಿ, ಆಲಿಸುತ್ತಲೂ ಇಲ್ಲ’ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಸಮಯ ಬದಲಾಗಲಿದೆ. ಭಾರತ ಒಂದಾಗಲಿದೆ. ಬಡವರ ಕಣ್ಣೀರು ಬರೆಸಲಾಗುವುದು ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.