ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೆ. 8ರಿಂದ 10ರವರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದು, ವಾಷಿಂಗ್ಟನ್ ಡಿಸಿ, ಡಲ್ಲಾಸ್, ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೊಡಾ ಅವರು ಈ ವಿಷಯ ಹಂಚಿಕೊಂಡಿದ್ದು, ರಾಹುಲ್ ಅವರು ವಿರೋಧ ಪಕ್ಷದ ನಾಯಕರಾದ ನಂತರ ಅಮೆರಿಕಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ ಎಂದಿದ್ದಾರೆ.
‘ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಲು ಅಮೆರಿಕದಲ್ಲಿರುವ ಭಾರತೀಯರು, ರಾಜತಾಂತ್ರಿಕರು, ಶಿಕ್ಷಣ ತಜ್ಞರು, ಉದ್ಯಮಿಗಳು, ಮುಖಂಡರು, ಅಂತರರಾಷ್ಟ್ರೀಯ ಮಾಧ್ಯಮದವರು ಹಾಗೂ ಇತರರು ಸಂವಾದ ನಡೆಸುವ ಬೇಡಿಕೆಯನ್ನು 32 ರಾಷ್ಟ್ರಗಳಲ್ಲಿ ಅಸ್ತಿತ್ವ ಹೊಂದಿರುವ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ಗೆ ಮಾಡಿಕೊಂಡಿದ್ದರು’ ಎಂದು ಪಿತ್ರೊಡಾ ತಮ್ಮ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಸೆ. 8ರಂದು ರಾಹುಲ್ ಅವರು ಡಲ್ಲಾಸ್‌ಗೆ ಹಾಗೂ ಸೆ. 9ರಂದು ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದಾರೆ. ಟೆಕ್ಸಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಸ್ಥೆಯ ತಜ್ಞರು ಹಾಗೂ ಸಮುದಾಯದ ಜನರೊಂದಿಗೆ ಅವರು ಸಂವಾದ ನಡೆಸಲಿದ್ದಾರೆ. ವಾಷಿಂಗ್ಟನ್‌ನಲ್ಲೂ ಇದೇ ಮಾದರಿಯ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದರಲ್ಲಿ ಚಿಂತಕರು, ಪ್ರೆಸ್ ಕ್ಲಬ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ’ ಎಂದಿದ್ದಾರೆ.
2004ರಲ್ಲಿ ಅಮೇಠಿ ಕ್ಷೇತ್ರದ ಮೂಲಕ ಲೋಕಸಭೆ ಪ್ರವೇಶಿಸಿದ ರಾಹುಲ್ ಗಾಂಧಿ, ಐದು ಬಾರಿ ಸಂಸದರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಕೇರಳದ ವಯನಾಡ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ನಂತರ ವಯನಾಡ್ ಕ್ಷೇತ್ರವನ್ನು ಅವರು ಬಿಟ್ಟುಕೊಟ್ಟರು. ಈ ಕ್ಷೇತ್ರಕ್ಕೆ ಅವರ ಸೋದರ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.