ನವದೆಹಲಿ: 2019ರ ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ಗುಜರಾತ್ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ತೀರ್ಪಿನ ಕುರಿತಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಭೀತಿಯಲ್ಲಿರುವ ಆಡಳಿತ ಯಂತ್ರವು ಸಾಮ, ದಾನ, ದಂಡ, ಭೇದದ ಮೂಲಕ ರಾಹುಲ್ ಗಾಂಧಿ ಅವರ ದನಿ ಅಡಗಿಸಲು ಪ್ರಯತ್ನಿಸುತ್ತಿದೆ’ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಮಾಡಿರುವ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.
‘ಇಂತಹುದಕ್ಕೆಲ್ಲ ನನ್ನ ಸಹೋದರ ಹಿಂದೆಂದೂ ಭಯಪಟ್ಟಿಲ್ಲ. ಮುಂದೆಯೂ ಭಯಪಡುವುದಿಲ್ಲ. ಜೀವನದುದ್ದಕ್ಕೂ ಅವರು ಸತ್ಯ ಮಾತನಾಡುತ್ತಲೇ ಜೀವಿಸಿದ್ದಾರೆ. ಅದನ್ನು ಮುಂದೆಯೂ ಮಾಡುತ್ತಾರೆ. ದೇಶದ ಜನರ ಪರವಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತಾರೆ’ಎಂದು ಪ್ರಿಯಾಂಕಾ ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ಒಂದು ಬೆರಳನ್ನು ಬೇರೆಯವರ ತಡೆ ತೋರಿಸಿದರೆ ಉಳಿದ ನಾಲ್ಕು ಬೆರಳುಗಳು ಅವರ ಕಡೆ ತಿರುಗಿರುತ್ತವೆ ಎಂಬುದನ್ನು ಮರೆಯಬಾರದು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
‘ಸರ್ವಾಧಿಕಾರಿ ಆಡಳಿತದ ವಿರುದ್ಧ ರಾಹುಲ್ ಗಾಂಧಿ ಧ್ವನಿ ಎತ್ತುತ್ತಿರುವುದು ಎಲ್ಲರಿಗೂ ಗೊತ್ತಿದೆ. ಧೈರ್ಯವಾಗಿ ತಪ್ಪನ್ನು ತಪ್ಪು ಎಂದು ಹೇಳುತ್ತಾರೆ. ರಾಹುಲ್ ಅವರ ಈ ಧೈರ್ಯದಿಂದ ಸರ್ವಾಧಿಕಾರಿ ಕಂಗೆಟ್ಟಿದ್ದಾರೆ. ಕೆಲವೊಮ್ಮೆ ಇ.ಡಿ, ಮತ್ತೊಮ್ಮೆ ಪೊಲೀಸ್, ಮಗದೊಮ್ಮೆ ಶಿಕ್ಷೆಗೆ ಒಳಪಡಿಸುವ ಮೂಲಕ ಅವರನ್ನು ಬೆದರಿಸುವ ಯತ್ನ ನಡೆಸಲಾಗುತ್ತಿದೆ. ಇದರ ವಿರುದ್ಧ ನಾವು ಹೋರಾಡಿ ಗೆಲ್ಲುತ್ತೇವೆ’ಎಂದು ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಇದು ನವ ಭಾರತ, ಅನ್ಯಾಯದ ವಿರುದ್ಧ ನೀವು ಧ್ವನಿ ಎತ್ತಿದರೆ ನಿಮ್ಮ ವಿರುದ್ಧ ಇ.ಡಿ, ಸಿಬಿಐ ಹಾಗೂ ಪೊಲೀಸ್ ಎಫ್‌ಐಆರ್ ದಾಖಲಾಗುವುದು’ಎಂದು ಟೀಕಿಸಿದ್ದಾರೆ.
‘ಸತ್ಯ ಮಾತನಾಡಿದ್ದಕ್ಕಾಗಿ ಹಾಗೂ ಸರ್ವಾಧಿಕಾರಿ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಹುಲ್ ಗಾಂಧಿಯವರನ್ನು ಯಾವಾಗಲೂ ಶಿಕ್ಷಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ದೇಶದ ಕಾನೂನು ನೀಡಿದೆ. ರಾಹುಲ್ ಗಾಂಧಿ ಅದನ್ನು ಮಾಡುತ್ತಾರೆ ಎಂದು ರಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.